LATEST NEWS
ಉಡುಪಿ – ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವತಿ ಆತ್ಮಹತ್ಯೆಗೆ ಯತ್ನ – ಚಿಕಿತ್ಸೆ ಫಲಕಾರಿಯಾಗದೇ ಸಾವು
ಉಡುಪಿ ನವೆಂಬರ್ 20: ಉಡುಪಿಯಲ್ಲಿ ವಿವಾಹ ನಿಶ್ಚಿತಾರ್ಥ ಆಗಿದ್ದ ಯುವತಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದ್ದು, ಮನೆಯವರು ಆಕೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರು, ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ.
ಉಡುಪಿ ತಾಲೂಕಿನ ದೆಂದೂರುಕಟ್ಟೆಯ ಇಂದ್ರಾಳಿ ನಿವಾಸಿ ಕೀರ್ತನಾ ಶೆಟ್ಟಿ ಆತ್ಮಹತ್ಯೆ ಮಾಡಿಕೊಂಡ ಯುವತಿ. ಮನೆಯ ಕೋಣೆಯಲ್ಲಿ ಕುತ್ತಿಗೆಗೆ ಶಾಲು ಬಿಗಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಬಳಿಕ ಅವರ ಮನೆಯವರು ಯುವತಿಯನ್ನು ಕೂಡಲೇ ರಕ್ಷಣೆ ಮಾಡಿ ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಯುವತಿಯನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಯುವತಿ ನವೆಂಬರ್. 17ರಂದು ಕೊನೆಯುಸಿರೆಳೆದಿದ್ದಾರೆ.
ಇನ್ನು ಮೃತ ಯುವತಿ ಕೀರ್ತನಾ ಮಣಿಪುರದ ಬೆಳ್ಳೆ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಮನೆಯಲ್ಲಿ ಮದುವೆ ನಿಶ್ಚಯ ಮಾಡಿ, ಒಂದೂವರೆ ತಿಂಗಳ ಹಿಂದೆ ನಿಶ್ಚಿತಾರ್ಥವನ್ನು ಮಾಡಿದ್ದರು. ಮುಂದಿನ ಕೆಲವು ದಿನಗಳಲ್ಲಿ ಯುವತಿಗೆ ಮದುವೆ ಮಾಡುವುದಕ್ಕೆ ಮನೆಯಲ್ಲಿ ಸಿದ್ಧತೆಯನ್ನೂ ಮಾಡಿಕೊಂಡಿದ್ದರು. ಆದರೆ, ಮದುವೆಗೂ ಮುನ್ನ ಯುವತಿ ನೇಣಿಗೆ ಕೊರಳೊಡ್ಡಿ ಆತ್ಮಯತ್ಯೆಗೆ ಯತ್ನಿಸಿದ್ದು, ಅದರಿಂದ ಕಾಪಾಡಿ ಚಿಕಿತ್ಸೆಗೆ ದಾಖಲಿಸಿದರೂ ಬದುಕುಳಿಯದೇ ಇಹಲೋಕ ತ್ಯಜಿಸಿದ್ದಾರೆ ಎಂದು ತಿಳಿದುಬಂದಿದೆ.