LATEST NEWS
ಮಂಗಳೂರ – ಬೀದಿ ಬದಿ ವ್ಯಾಪಾರಿಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ
ಮಂಗಳೂರು ಜುಲೈ 29:, ಬೀದಿ ಬದಿ ವ್ಯಾಪಾರಿಗಳ ಮೇಲೆ ಮಂಗಳೂರು ಮಹಾನಗರಪಾಲಿಕೆ ಟೈಗರ್ ಕಾರ್ಯಾಚರಣೆ ಆರಂಭಿಸಿದೆ. ಲೇಡಿಹಿಲ್‌ನ ನಾರಾಯಣ ಗುರು ವೃತ್ತದಿಂದ ಮಣ್ಣಗುಡ್ಡೆವರೆಗೆ ಹಾಗೂ ಕೆಪಿಟಿಯಿಂದ ಯೆಯ್ಯಾಡಿವರೆಗೆ ರಸ್ತೆ ಬದಿಯಲ್ಲಿ ಗೂಡಂಗಡಿಗಳನ್ನುಇಂದು ತೆರವುಗೊಳಿಸಲಾಯಿತು. ಈ ವೇಳೆ ಬೀದಿ ಬದಿ ವ್ಯಾಪಾರಿಗಳು ಹಾಗೂ ಅವರ ಸಂಘಟನೆಯ ಮುಖಂಡರು ಭಾರಿ ಸಂಖ್ಯೆಯಲ್ಲಿ ಸ್ಥಳದಲ್ಲಿ ಸೇರಿ ಪ್ರತಿರೋಧ ಒಡ್ಡಿದರು. ಕೆಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪಾಲಿಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಪೊಲೀಸರ ನೆರವಿನೊಂದಿಗೆ ಟೈಗರ್ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ಈ ವೇಳೆ ಅಂಗಡಿಗಳನ್ನು ಬುಲ್‌ಡೋಜರ್‌ಗಳ ಮೂಲಕ ಗೂಡಂಗಡಿಗಳನ್ನು ಧ್ವಂಸಗೊಳಿಸಿದೆ. ಅದರಲ್ಲಿದ್ದ ಮಾರಾಟ ಸಾಮಗ್ರಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅಂಗಡಿಯನ್ನು ಹಾನಿಗೊಳಿಸದಂತೆ ವ್ಯಾಪಾರಿಗಳು ಗೋಳಿಟ್ಟರೂ ಅಧಿಕಾರಿಗಳು ಕಿವಿಗೊಡಲಿಲ್ಲ.
ಮಣ್ಣಗುಡ್ಡೆಯಲ್ಲಿ ಅಂಗಡಿಗಳನ್ನು ತೆರವುಗೊಳಿಸುವಾಗ ಬೀದಿ ಬದಿ ವ್ಯಾಪಾರಿಗಳು ಹಾಗೂ ಅವರ ಸಂಘಟನೆಯ ಮುಖಂಡರು ಭಾರಿ ಸಂಖ್ಯೆಯಲ್ಲಿ ಸ್ಥಳದಲ್ಲಿ ಸೇರಿ ಪ್ರತಿರೋಧ ಒಡ್ಡಿದರು. ಬುಲ್‌ಡೋಜರ್‌ಗೆ ಅಡ್ಡ ನಿಂತು ಪ್ರತಿಭಟಿಸಿದರು. ಇದಕ್ಕೆ ಕಿವಿಗೊಡದ ಪಾಲಿಕೆ ಅಧಿಕಾರಿಗಳು ತೆರವು ಕಾರ್ಯಾಚರಣೆ ಮುಂದುವರಿಸಿ ಸರಕು ಸರಂಜಾಮುಗಳನ್ನು ಲಾರಿಯಲ್ಲಿ ತುಂಬಿಕೊಂಡು ಹೋದರು.
‘ಬಡವರನ್ನು ಬೀದಿಗೆ ತರುತ್ತಿದ್ದೀರಿ. ಬೀದಿ ಬದಿ ವ್ಯಾಪಾರಕ್ಕೆ ವಲಯ ನಿರ್ಮಿಸುವುದಿಲ್ಲ. ಮಣ್ಣಗುಡ್ಡೆಯಲ್ಲಿ ಬೀದಿ ಬದಿ ವ್ಯಾಪಾರ ವಲಯ ನಿರ್ಮಿಸಲು ಸ್ಥಳೀಯರ ವಿರೋಧವಿದೆ ಎಂದು ಮೇಯರ್ ಹೇಳಿಕೆ ಕೊಡುತ್ತಾರೆ. ದೊಡ್ಡವರ ವ್ಯಾಪಾರಕ್ಕೆ ಯಾರ ವಿರೋಧವೂ ಇರುವುದಿಲ್ಲ. ಹೊರರಾಜ್ಯದವರು ಬಂದು ಬೀದಿ ಬದಿ ವ್ಯಾಪಾರ ನಡೆಸಿದರೆ ಏನೂ ಮಾಡುತ್ತಿಲ್ಲ. ಸ್ಥಳೀಯರನ್ನು ಗುರಿ ಮಾಡಿ ಕಾರ್ಯಾಚರಣೆ ನಡೆಸಲಾಗಿದೆ’ ಎಂದು ಬೀದಿ ಬದಿ ವ್ಯಾಪಾರಿಗಳು ಆರೋಪಿಸಿದರು.