LATEST NEWS
ಮಂಗಳೂರು – ಸುರಿಯುವ ಮಳೆ ಲೆಕ್ಕಿಸದೇ ಅಪರೇಷನ್ ಸಿಂಧೂರ ವಿಜಯೋತ್ಸವ

ಮಂಗಳೂರು ಮೇ 20: ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ನಡೆಸಿದ ಅಪರೇಷನ್ ಸಿಂಧೂರದ ವಿಜಯೋತ್ಸವ ಮಂಗಳೂರಿನಲ್ಲಿ ನಡೆಯಿತು. ಸುರಿಯುತ್ತಿರುವ ಭಾರೀ ಮಳೆಯನ್ನು ಲೆಕ್ಕಿಸದೇ ವಿಧ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಕೈಯಲ್ಲಿ ರಾಷ್ಟ್ರಧ್ವಜವನ್ನು ಹಿಡಿದು ‘ಸಿಂಧೂರ ವಿಜಯೋತ್ಸವ’ ಜಾಥಾದಲ್ಲಿ ಉತ್ಸಾಹದಿಂದ ಪಾಲ್ಗೊಂಡರು.
ಪಾಕಿಸ್ತಾನದ ವಿರುದ್ಧ ನಡೆಸಿದ ‘ಅಪರೇಷನ್ ಸಿಂಧೂರ’ ಕಾರ್ಯಾಚರಣೆಯಲ್ಲಿ ಶೌರ್ಯ ಮೆರೆದ ಯೋಧರಿಗೆ ಗೌರವ ಸಲ್ಲಿಸಲು ಸಿಂಧೂರ ವಿಜಯೋತ್ಸವ ಸಮಿತಿಯು ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ‘ಸಿಂಧೂರ ವಿಜಯೋತ್ಸವ’ ಜಾಥಾ ದೇಶದ ವಿಚಾರದಲ್ಲಿ ಜನರ ಒಗ್ಗಟ್ಟನ್ನು ಸಾರಿತು. ಪಿವಿಎಸ್ ವೃತ್ತದಿಂದ ಲಾಲ್‌ಬಾಗ್ ಪಾಲಿಕೆ ಕೇಂದ್ರ ಕಚೇರಿವರೆಗೆ ನಡೆದ ಜಾಥಾದಲ್ಲಿ ಭಾಗವಹಿಸಿದ ಸಾವಿರಾರು ಮಂದಿ ‘ಸೇನೆಯ ಜೊತೆ ನಾವಿದ್ದೇವೆ’ ಎಂಬ ಸಂದೇಶ ಸಾರಿದರು.

ಕಾರ್ಯಕ್ರಮ ದಲ್ಲಿ ಮಠದೀಶರಾದ ಓಡಿಯೂರು ಶ್ರೀ ಗಳು ವಜ್ರದೇಹಿ ಶ್ರೀ ಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು. ಸಾಮಾಜಿಕ ಕಾರ್ಯಕರ್ತೆ ರಶ್ಮಿ ಸಮಂತ್ ಹಾಗೂ ಕರ್ನಲ್ ಸುಧೀರ್ ಪೈ ಸಭೆ ಉದ್ದೇಶಿಸಿ ಮಾತನಾಡಿದರು. ಸಭೆಯಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್, ಗಣೇಶ್ ಕಾರ್ಣಿಕ್, ಪ್ರದೀಪ್ ಕಲ್ಕೂರ್ ಗಣ್ಯಾತಿ ಗಣ್ಯರು, ಬಿ.ಜೆ.ಪಿ. ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.
ಲಾಲ್‌ಬಾಗ್‌ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಸುಧೀರ್ ಎಂ. ಪೈ, ‘ದೇಶದ ಹೊರಗಿನ ಶತ್ರುಗಳಿಗಿಂತ ದೇಶಗೊಳಗಿನ ಶತ್ರುಗಳ ಬಗ್ಗೆ ಎಚ್ಚರ ವಹಿಸಬೇಕಿದೆ. ಆಪರೇಷನ್ ಕಾರ್ಯಾಚರಣೆ ಸಂದರ್ಭದಲ್ಲಿ ದೇಶವೇ ಒಟ್ಟಾಗಿ ಸೇನೆಯ ಬೆಂಬಲಕ್ಕೆ ನಿಂತಿದೆ’ ಎಂದರು.
ಭಾರತದಲ್ಲಿ ತಯಾರಾಗಿ ಪಾಕಿಸ್ತಾನದ ನೆಲದಲ್ಲಿ ಪರೀಕ್ಷಿಸಲಾದ ಕ್ಷಿಪಣಿಗಳು ನಮ್ಮ ಸೇನೆಯ ಬಳಿ ಇವೆ. ನಾವು ಯೋಚಿಸಬೇಕಾದುದು ನಮ್ಮ ಸೈನಿಕರು ಏನು ಮಾಡುತ್ತಿದ್ದಾರೆ ಎಂಬ ಬಗ್ಗೆ ಅಲ್ಲ. ಆದರೆ ದೇಶದ ಒಳಗೆ ಹಾಗೂ ಆಸುಪಾಸಿನಲ್ಲಿ ಏನಾಗುತ್ತಿದೆ ಎಂಬ ಬಗ್ಗೆ ಜಾಗರೂಕರಾಗಬೇಕಿದೆ. ನೆರೆ ಹೊರೆಯಲ್ಲಿ ಎಷ್ಟು ರೊಹಿಂಗ್ಯಾ ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಪ್ರಜೆಗಳು ನೆಲೆಸಿದ್ದಾರೆ. ನಮ್ಮ ಮಕ್ಕಳು ಯಾವ ವಿಚಾರಗಳನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ ಎಂಬ ಬಗ್ಗೆ ಯೋಚಿಸಬೇಕಿದೆ’ ಎಂದು ರಶ್ಮಿ ಸಾಮಂತ್ ಹೇಳಿದರು.