DAKSHINA KANNADA
‘ಆಪರೇಷನ್ ಸಿಂಧೂರ್’ ದೇಶದ ಸೈನಿಕರ ಆತ್ಮಸ್ಥೈರ್ಯವನ್ನೇ ಇಮ್ಮಡಿಗೊಳಿಸಿದೆ: ಸಂಸದ ಬ್ರಿಜೇಶ್ ಚೌಟ

ಮಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಪಂಜಾಬ್‌ನ ಆದಂಪುರ ವಾಯುನೆಲೆಗೆ ಭೇಟಿ ನೀಡಿ ವಾಯುಸೇನೆಯ ಯೋಧರು, ಸೇನಾಧಿಕಾರಿಗಳನ್ನು ಅಭಿನಂದಿಸಿ ಬೆನ್ನು ತಟ್ಟಿರುವುದು ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯಲ್ಲಿ ದೇಶದ ಸೈನಿಕರ ಆತ್ಮಸ್ಥೈರ್ಯವನ್ನೇ ಇಮ್ಮಡಿಗೊಳಿಸುವ ಜತೆಗೆ ಪಾಕಿಸ್ತಾನಕ್ಕೂ ದೊಡ್ಡ ಎಚ್ಚರಿಕೆ ಸಂದೇಶ ರವಾನಿಸಿದಂತಾಗಿದೆ ಎಂದು ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಹೇಳಿದ್ದಾರೆ.
ಪ್ರಧಾನಮಂತ್ರಿ ಮೋದಿ ಅವರು ದೇಶದ ಪ್ರಮುಖ ವಾಯುನೆಲೆಗೆ ಪಾಕಿಸ್ತಾನದ ವಿರುದ್ಧದ ಸಂಘರ್ಷ ನಡೆಯುತ್ತಿರುವಾಗಲೇ ಭೇಟಿ ನೀಡಿರುವುದು ಗಮನಾರ್ಹ ಬೆಳವಣಿಗೆ. ಇದರೊಂದಿಗೆ ಅವರು ಕಾರ್ಯಾ ಚರಣೆ ಮುಂಚೂಣಿಯಲ್ಲಿರುವ ನಮ್ಮ ಸೈನಿಕರು, ಸೇನಾಧಿಕಾರಿಗಳಿಗೆ ಮತ್ತಷ್ಟು ಧೈರ್ಯ, ಆತ್ಮಬಲವನ್ನು ತುಂಬಿದ್ದಾರೆ. ಎಂದು ಬ್ರಿಜೇಶ್ ಅಭಿಪ್ರಾಯಪಟ್ಟಿದ್ದಾರೆ.

ಯುದ್ಧಭೂಮಿಯಲ್ಲಿ ತಮ್ಮ ಜೀವವನ್ನೇ ಮುಡುಪಾಗಿಟ್ಟು ಹೋರಾಡುವ ಯೋಧರ ಶೌರ್ಯ, ತ್ಯಾಗ ಮತ್ತು ಪರಿಶ್ರಮವನ್ನು ಗುರುತಿಸಿ ಗೌರವಿಸಿದಾಗ ಸೈನಿಕರ ಮತ್ತು ಸೇನೆಯ ಆತ್ಮವಿಶ್ವಾಸ ಮತ್ತಷ್ಟು ವೃದ್ದಿಸು ತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ನಮ್ಮ ಸಶಸ್ತ್ರ ಪಡೆಗಳು ಮತ್ತಷ್ಟು ಬಲಶಾಲಿ ಮತ್ತು ಸನ್ನದ್ಧವಾಗಿದ್ದು, ವಿಶ್ವದಲ್ಲಿ ಶ್ರೇಷ್ಠ ಮಟ್ಟದಲ್ಲಿವೆ. ಆದಂಪುರ ವಾಯುನೆಲೆಗೆ ಭೇಟಿ ನೀಡುವ ಮೂಲಕ ಪ್ರಧಾನಮಂತ್ರಿಗಳು ವಾಯು ಯೋಧರಿಗೆ ಆತ್ಮಸ್ಥೈರ್ಯ ಹೆಚ್ಚಿಸಿದ್ದರೆ ಅತ್ತ, ಪಾಕಿಸ್ತಾನದಂತಹ ಶತ್ರುಗಳಲ್ಲಿ ನಡುಕ ಹುಟ್ಟಿಸಿದ್ದಾರೆ ಎಂದಿದ್ದಾರೆ.
ನಮ್ಮ ಸೇನಾ ಪಡೆಗಳು ವಿಶ್ವದ ಅತ್ಯುತ್ತಮ ಮಿಲಿಟರಿ ಸಾಧನಗಳನ್ನು ಹೊಂದಿದ್ದು, ಇದೀಗ ನಾವು ‘ಆಪರೇಷನ್ ಸಿಂಧೂರ್’ ಮೂಲಕ ನಮ್ಮ ಮಿಲಿಟರಿ ಸಾಮರ್ಥ್ಯ, ಶಕ್ತಿ ಹಾಗೂ ತಂತ್ರಜ್ಞಾನವನ್ನು ಇಡೀ ಜಗತ್ತಿಗೆ ಸಾಬೀತುಪಡಿಸಿದ್ದೇವೆ. ಆತ್ಮನಿರ್ಭರ್ ಭಾರತ್ ಮತ್ತು ಮೇಕ್ ಇನ್ ಇಂಡಿಯಾ ಉಪಕ್ರಮಗಳ ಮೂಲಕ ರಕ್ಷಣಾ ವಲಯದಲ್ಲಿ ಸಾಧಿಸಲಾದ ಸ್ವದೇಶೀಕರಣ ಮತ್ತು ಆಧುನೀಕರಣದ ಒಂದು ಸ್ಪಷ್ಟ ಚಿತ್ರಣವನ್ನು ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಸಂದರ್ಭದಲ್ಲಿ ವಿಶ್ವವು ಕಂಡಿದೆ ಎಂದು ಚೌಟ ಹೇಳಿದ್ದಾರೆ.