BANTWAL
ಶರತ್ ಮಡಿವಾಳ ಕೊಲೆಯ ಹಿಂದಿರುವ ಆರೋಪಿಗಳನ್ನು ಪೊಲೀಸರು ಪತ್ತೆ ಮಾಡಿಲ್ಲ – ತನಿಯಪ್ಪ ಮಡಿವಾಳ

ಶರತ್ ಮಡಿವಾಳ ಕೊಲೆಯ ಹಿಂದಿರುವ ಆರೋಪಿಗಳನ್ನು ಪೊಲೀಸರು ಪತ್ತೆ ಮಾಡಿಲ್ಲ – ತನಿಯಪ್ಪ ಮಡಿವಾಳ
ಮಂಗಳೂರು ಜುಲೈ 7: ಕಳೆದ ಬಾರಿ ದಕ್ಷಿಣ ಕನ್ನಡದಲ್ಲಿ ಕೋಮು ದಳ್ಳುರಿಗೆ ಕಾರಣವಾಗಿದ್ದ ಬಂಟ್ವಾಳದ ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಕೊಲೆಯಾಗಿ ಇಂದಿಗೆ ಒಂದು ವರ್ಷ. ಹೀಗಾಗಿ ಬಂಟ್ವಾಳದ ಸಜಿಪಮುನ್ನೂರಿನಲ್ಲಿ ಶರತ್ ಗೆಳೆಯರು ಸೇರಿ ಆತನ ನೆನಪಲ್ಲಿ ಅಪೂರ್ವ ಸ್ಮಾರಕ ನಿರ್ಮಿಸಿದ್ದಾರೆ.
ಭಾರತ ಮಾತೆಯ ಬೃಹತ್ ಚಿತ್ರದ ಹಿನ್ನೆಲೆಯನ್ನು ಹೊಂದಿರುವ ಸ್ಮಾರಕವನ್ನು ಕೇವಲ ಒಂದು ತಿಂಗಳಲ್ಲಿ ಗೆಳೆಯರೇ ಸೇರಿ ನಿರ್ಮಿಸಿದ್ದಾರೆ. ಇದೇ ವೇಳೆ, ಮಾತನಾಡಿದ ಶರತ್ ತಂದೆ ತನಿಯಪ್ಪ ಮಡಿವಾಳ, ತನ್ನ ಮಗ ಅಮಾಯಕ. ಯಾರ ತಂಟೆಗೂ ಹೋಗದೇ ತನ್ನ ಪಾಡಿಗಿರುತ್ತಿದ್ದ ಮಗನನ್ನು ಕಟುಕರು ಕೊಂದಿದ್ದಾರೆ. ಪೊಲೀಸರು ಕೆಲವರನ್ನು ಬಂಧಿಸಿದ್ದಾರೆ.

ಆದರೆ, ಯಾರು ಈ ಕೊಲೆಯ ಹಿಂದಿದ್ದಾರೆ ಅನ್ನೋದನ್ನು ಪೊಲೀಸರು ಪತ್ತೆ ಮಾಡಿಲ್ಲ. ಆಗಿನ ಉಸ್ತುವಾರಿ ಸಚಿವ ರಮಾನಾಥ ರೈಯೋ, ಜಿಪಂ ಸದಸ್ಯ ಪ್ರಕಾಶ್ ಶೆಟ್ಟಿ ಇದ್ದಾರೆಯೇ ಅನ್ನುವುದು ಪತ್ತೆಯಾಗಬೇಕು. ಯಾಕೆ ನನ್ನ ಮಗನ ಕೊಲೆ ಮಾಡಿದ್ದಾರೆ ಅನ್ನುವುದು ಗೊತ್ತಾಗದೆ ಚಡಪಡಿಸುತ್ತಿದ್ದೇನೆ. ಇನ್ನು ನನ್ನನ್ನು ಮುಗಿಸಿದರೂ ಚಿಂತೆಯಿಲ್ಲ. ಕೊಲೆಗೆ ಕಾರಣ ತಿಳಿಯಬೇಕು ಅಂತಾ ನೋವು ತೋಡಿಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕರು ಸೇರಿದಂತೆ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಸೇರಿ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು. ಕಳೆದ 2017ರ ಜುಲೈ ನಾಲ್ಕರಂದು ರಾತ್ರಿ 9.30ರ ಸುಮಾರಿಗೆ ಬಂಟ್ವಾಳದ ಬಿ.ಸಿ.ರೋಡಿನ ತನ್ನ ಉದಯ ಲಾಂಡ್ರಿ ಶಾಪ್ ನಲ್ಲಿದ್ದ ಶರತ್ ನನ್ನು ದುಷ್ಕರ್ಮಿಗಳು ಕಡಿದು ಕೊಲೆಗೈದಿದ್ದರು. ಎರಡು ದಿನಗಳ ಬಳಿಕ ಮಂಗಳೂರಿನ ಆಸ್ಪತ್ರೆಯಲ್ಲಿ ಶರತ್ ಕೊನೆಯುಸಿರೆಳೆದಿದ್ದ. ಪ್ರಕರಣ ಸಂಬಂಧಿಸಿ ಪೊಲೀಸರು 11 ಮಂದಿಯನ್ನು ಬಂಧಿಸಿದ್ದರು.
ಆದರೆ, ಪ್ರಮುಖ ಆರೋಪಿಗಳಾದ ಇಬ್ರಾಹಿಂ ಮತ್ತು ಕಲಂದರ್ ಸೇರಿ ನಾಲ್ವರು ಇನ್ನೂ ತಲೆಮರೆಸಿಕೊಂಡಿದ್ದಾರೆ. ರಾಜಕಾರಣಿಗಳ ಆಶ್ರಯದಿಂದಾಗಿಯೇ ಪ್ರಮುಖ ಆರೋಪಗಳನ್ನು ಬಂಧಿಸಿಲ್ಲ ಅನ್ನುವ ಆರೋಪ ಇದೆ.