LATEST NEWS
ಬಿಹಾರ ಮೂಲದ ವ್ಯಕ್ತಿಗೆ 10 ಕೋಟಿ ವಂಚಿಸಿದ ರೋಶನ್ ಸಲ್ದಾನಾ – ಪ್ರಕರಣ ಸಿಐಡಿಗೆ

ಮಂಗಳೂರು ಜುಲೈ 22: ದೇಶದ ವಿವಿದೆಡೆ ನೂರಾರು ಜನರಿಗೆ ಸಾಲಕೊಡಿಸುವ ನೆಪದಲ್ಲಿ ಕೊಟ್ಯಾಂತರ ರೂಪಾಯಿ ವಂಚಿಸಿ ಮಂಗಳೂರಿನಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ ರೋಶನ್ ಸಲ್ದಾನಾ ವಂಚನೆ ಪ್ರಕರಣದಲ್ಲಿ ಒಂದು ಪ್ರಕರಣವನ್ನು ಇದೀಗ ಸಿಐಡಿ ತನಿಖೆ ನಡೆಸಲಿದೆ.
ದೇಶಾದ್ಯಂತ ಉದ್ಯಮಿಗಳನ್ನು ಗುರಿಯಾಗಿಸಿ ಮೋಸದ ಜಾಲದಲ್ಲಿ ಸಿಲುಕಿಸುತ್ತಿದ್ದ ರೋಶನ್ ಸಲ್ಮಾನ ವಿರುದ್ಧ ಬಿಹಾರ ಮೂಲದ ಉದ್ಯಮಿಯೊಬ್ಬರು ಮಂಗಳೂರಿನಲ್ಲಿ ಕೇಸು ದಾಖಲಿಸಿದ್ದಾರೆ. ತನಗೆ ಹತ್ತು ಕೋಟಿಗೂ ಮಿಕ್ಕಿ ಮೋಸ ಮಾಡಿದ್ದಾಗಿ ದೂರು ನೀಡಿದ್ದಾರೆ. ಹತ್ತು ಕೋಟಿಯಷ್ಟು ಮೊತ್ತದ ವಂಚನೆ ಪ್ರಕರಣ ದಾಖಲಾದರೆ, ಸಿಐಡಿಗೆ ಕೊಡಬೇಕೆಂಬ ಕಾನೂನಿನಂತೆ ಸದ್ರಿ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ ಎಂದು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಮಹಾರಾಷ್ಟ್ರ, ಬೆಂಗಳೂರಿನ ಉದ್ಯಮಿಗಳು ಸೇರಿ ಒಟ್ಟು ಐದು ಮಂದಿ ರೋಶನ್ ಸಲ್ಮಾನ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದಾರೆ. ಸೋಮವಾರ ಬಿಹಾರ ಮೂಲದ ಉದ್ಯಮಿಯೊಬ್ಬರು ಹತ್ತು ಕೋಟಿ ವಂಚನೆ ಮಾಡಿರುವ ಬಗ್ಗೆ ದೂರು ನೀಡಿದ್ದಾರೆ. ಈವರೆಗೆ ಒಟ್ಟು 50 ಕೋಟಿಗೂ ಹೆಚ್ಚು ವಂಚನೆ ಎಸಗಿರುವ ಬಗ್ಗೆ ಪ್ರಕರಣ ದಾಖಲಾಗಿದ್ದು, ಬಿಹಾರ ಮೂಲದ ಉದ್ಯಮಿಯ ಪ್ರಕರಣ ಹೊರತುಪಡಿಸಿ ಉಳಿದವನ್ನು ಮಂಗಳೂರು ಪೊಲೀಸರೇ ತನಿಖೆ ನಡೆಸಲಿದ್ದಾರೆ.
ಈ ನಡುವೆ ಸೋಮವಾರ ಹೈದರಾಬಾದ್ ಮೂಲದ ವ್ಯಕ್ತಿಯೊಬ್ಬರು ತನಗೆ ರೋಶನ್‌ನಿಂದ 1 ಕೋಟಿ ರೂಪಾಯಿ ವಂಚನೆ ಆಗಿದೆ ಎಂದು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಅವರ ದೂರನ್ನು ಆಧರಿಸಿ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳೂರಿನಲ್ಲಿ ರೋಶನ್ ವಿರುದ್ಧ ಸಿಐಡಿಗೆ ವಹಿಸಿದ ಪ್ರಕರಣ ಸೇರಿ ಎರಡು ಪ್ರಕರಣ ಈ ಹಿಂದೆ ದಾಖಲಾಗಿತ್ತು. ಇತ್ತೀಚೆಗೆ ಆತನನ್ನು ಬಂಧಿಸಿದ ಬಳಿಕ ಮಹಾರಾಷ್ಟ್ರದ ಉದ್ಯಮಿಗೆ 5 ಕೋಟಿ ರೂಪಾಯಿ ಮತ್ತು ಅಸ್ಸಾಂ ಮೂಲದ ವ್ಯಕ್ತಿಗೆ 20 ಲಕ್ಷ ವಂಚನೆ ಮಾಡಿರುವ ಕುರಿತಂತೆ ಪ್ರಕರಣ ದಾಖಲಾಗಿತ್ತು. ಇದಲ್ಲದೆ ಚಿತ್ರದುರ್ಗ ನಗರ ಠಾಣೆಯಲ್ಲೂ ಆಂಧ್ರದ ಉದ್ಯಮಿಗೆ 40 ಲಕ್ಷ ರೂಪಾಯಿ ವಂಚನೆ ಮಾಡಿರುವ ಕುರಿತು ಕೇಸ್ ದಾಖಲಾಗಿದೆ.
ವಂಚನೆಯ ಮೊತ್ತ 10 ಕೋಟಿ ರೂಪಾಯಿ ಮತ್ತು ಅದಕ್ಕಿಂತ ಹೆಚ್ಚಿದ್ದರೆ ಸಿಐಡಿಗೆ ವರ್ಗಾಯಿಸಲು ಅವಕಾಶವಿದೆ. ಅದರಂತೆ 10 ಕೋಟಿ ರೂಪಾಯಿ ಮೊತ್ತದ ಪ್ರಕರಣದ ತನಿಖೆ ನಡೆಸುವಂತೆ ಈ ಮೊದಲೇ ಸಿಐಡಿಗೆ ಪತ್ರ ಬರೆಯಲಾಗಿತ್ತು. ಬಿಹಾರ ಮೂಲದ ಉದ್ಯಮಿಯೊಬ್ಬರು ಭೂ ಖರೀದಿ ವಿಚಾರದಲ್ಲಿ ವಂಚನೆಗೆ ಒಳಗಾದ ಪ್ರಕರಣ ಇದಾಗಿದ್ದು, ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸೆನ್ ಠಾಣೆಯಲ್ಲಿ ದಾಖಲಾಗಿರುವ ಇತರ ಪ್ರಕರಣಗಳ ತನಿಖೆಯನ್ನು ಪೊಲೀಸರೇ ನಡೆಸಲಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.