DAKSHINA KANNADA
ಆಗಸ್ಟ್ 27ಕ್ಕೆ ದಂಬೆಕ್ಕಾನ ಸದಾಶಿವ ರೈ ರಚಿತ “ಬಂಟ ಮದುವೆ” ಪುಸ್ತಕ ಬಿಡುಗಡೆ
ಪುತ್ತೂರು, ಆಗಸ್ಟ್ 25: ದಂಬೆಕ್ಕಾನ ಸದಾಶಿವ ರೈ ಯವರಿಂದ ರಚಿತವಾದ ಬಂಟ ಮದುವೆ ಪುಸ್ತಕದ ಬಿಡುಗಡೆ, ಶ್ರೀ ರಾಮಕೃಷ್ಣ ಪ್ರೌಢಶಾಲೆಯ ವಿಜ್ಞಾನ ಪ್ರಯೋಗಾಲಯದ ಉದ್ಘಾಟನೆ ಮತ್ತು ಡಾ.ಪಿ.ಬಿ.ರೈ ಪ್ರತಿಷ್ಠಾನದ ವತಿಯಿಂದ ನೀಡಲಾಗುವ ಅಣಿಲೆ ವೆಂಕಪ್ಪ ರೈ ಪ್ರಶಸ್ತಿ ಪ್ರಧಾನ ಸಮಾರಂಭವು ಆಗಸ್ಟ್ 27 ರಂದು ಪುತ್ತೂರಿನ ಬಂಟರ ಭವನದಲ್ಲಿ ನಡೆಯಲಿದೆ ಎಂದು ಬಂಟವರ ಯಾನೆ ನಾಡವರ ಮಾತೃ ಸಂಘ,ಮಂಗಳೂರು ಇದರ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಡಿ ಹೇಳಿದರು.
ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮೂರು ವಿಶೇಷ ಕಾರ್ಯಕ್ರಮಗಳನ್ನು ಒಂದೇ ವೇದಿಕೆಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಸಮಾರಂಭದಲ್ಲಿ ಬಿಡುಗಡೆಯಾಗಲಿರುವ ಬಂಟ ಮದುವೆ ಪುಸ್ತಕವು ಬಂಟ ಸಮುದಾಯ ಯಾವ ಪದ್ಧತಿಯನ್ನು ಅನುಸರಿಸಿಕೊಂಡು ಮದುವೆಯಾಗಬೇಕು ಎನ್ನುವ ಮಾಹಿತಿಯನ್ನು ನೀಡಲಿದೆ.
ಬಂಟ ಸಮುದಾಯದಲ್ಲಿ ವೈದಿಕ ವಿಧಿ-ವಿಧಾನಗಳ ಮೂಲಕ ಮದುವೆಯಾಗುವ ಸಂಪ್ರದಾಯವಿಲ್ಲದಿದ್ದರೂ,ಇಂದು ಹೋಮ ಮಾಡುವ ಮೂಲಕ ಮದುವೆ ಮಾಡಿಸಲಾಗುತ್ತಿದೆ. ಇದು ಬಂಟ ಸಮುದಾಯದ ಪದ್ಧತಿಯ ವಿರುದ್ಧವಾಗಿದ್ದು,ಈ ಪುಸ್ತಕದ ಮೂಲಕ ಬಂಟ ಸಮುದಾಯಕ್ಕೆ ಸರಿಯಾದ ಮಾರ್ಗದರ್ಶನ ನೀಡುವ ಪ್ರಯತ್ನವನ್ನು ಲೇಖಕರು ನಡೆಸಿದ್ದಾರೆ ಎಂದು ಅವರು ಮಾಹಿತಿ ನೀಡಿದರು.