LATEST NEWS
ಉಡುಪಿ – ಫೈವ್ ಸ್ಟಾರ್ ಹೊಟೇಲ್ ಗಳಿಗೆ ವಂಚಿಸುತ್ತಿದ್ದ ಅಜ್ಜ ಮಣಿಪಾಲದಲ್ಲಿ ಪೊಲೀಸ್ ಅತಿಥಿ
ಉಡುಪಿ ಡಿಸೆಂಬರ್ 11: ದೇಶದ ವಿವಿಧ ಫೈವ್ ಸ್ಟಾರ್ ಹೊಟೇಲ್ ಗಳಲ್ಲಿ ರೂಂ ಮಾಡಿ ಊಟ ತಿಂಡಿ ತಿಂದು ಸಾವಿರಾರು ರೂಪಾಯಿ ಬಿಲ್ ಮಾಡಿ ಬಳಿಕ ಎಸ್ಕೇಪ್ ಆಗುತ್ತಿದ್ದ ಅಜ್ಜನನ್ನು ಮಣಿಪಾಲ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬಂಧಿತನನ್ನು ತಮಿಳುನಾಡು ರಾಜ್ಯದ ತೂತುಕುಡಿಯ ಬಿಮ್ಸೆಂಟ್ ಜಾನ್(67) ಎಂದು ಗುರುತಿಸಲಾಗಿದೆ. ಆರೋಪಿ ಡಿಸೆಂಬರ್ 7 ರಂದು ಮಣಿಪಾಲ ಕಂಟ್ರಿ ಇನ್ ಹೊಟೇಲ್‌ನಲ್ಲಿ ರೂಮ್ ಪಡೆದುಕೊಂಡಿದ್ದ, ಮುಂಗಡ ಹಣವನ್ನು ಡಿಸೆಂಬರ್ 9ರಂದು ಕೊಡುವುದಾಗಿ ಹೇಳಿದ್ದ, ಬಳಿಕ ಡಿಸೆಂಬರ್ 12ರಂದು ರೂಮ್ ಚೆಕ್‌ಔಟ್ ಮಾಡುತ್ತೇನೆ ಎಂದು ಹೊಟೇಲ್ ಮ್ಯಾನೇಜರ್‌ನ್ನು ನಂಬಿಸಿದ್ದ, ಬಳಿಕ ಹೊಟೆಲ್‌ನಲ್ಲಿಯೇ ಊಟ ತಿಂಡಿ ಮಾಡಿ ಒಟ್ಟು 39,298ರೂ. ಬಿಲ್ ಮಾಡಿ, ಹಣ ಕೊಡದೇ ಪರಾರಿಯಾಗಿದ್ದ ಅಜ್ಜ, ಈ ಬಗ್ಗೆ ಹೊಟೇಲ್ ನವರು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು. ಈ ಪ್ರಕರಣದ ಕುರಿತಂತೆ ಕಾರ್ಯಾಚರಣೆ ನಡೆಸಿದ ಮಣಿಪಾಲ ಪೊಲೀಸ್ ನಿರೀಕ್ಷಕ ದೇವರಾಜ್ ,ಆರೋಪಿ ಜೋನ್ ನನ್ನು ಮಣಿಪಾಲದಲ್ಲೇ ಬಂಧಿಸಿದ್ದಾರೆ.
ಬಳಿಕ ಆರೋಪಿಯನ್ನು ವಿಚಾರಿಸಿದಾಗ ಆರೋಪಿ ದೆಹಲಿ, ಮಹಾರಾಷ್ಟ್ರ ಥಾಣೆ, ಕೇರಳದ ಕೊಲ್ಲಂ ಸೇರಿದಂತೆ ಹಲವು ರಾಜ್ಯಗಳಲ್ಲಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಈತ ಪ್ರತಿಷ್ಠಿತ ಫೈವ್ ಸ್ಟಾರ್ ಹೊಟೇಲ್‌ಗಳಲ್ಲಿ ರೂಮ್ ಪಡೆದು ಕೊಂಡು ಸಾವಿರಾರು ರೂಪಾಯಿ ಬಿಲ್ ಮಾಡಿ, ಬಳಿಕ ಹಣ ಪಾವತಿಸದೆ ಪರಾರಿಯಾಗಿ ವಂಚಿಸುತ್ತಿದ್ದ, ಪದವೀಧರನಾಗಿರುವ ಈತನ ವಿರುದ್ಧ ದೇಶದ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 49 ಪ್ರಕರಣಗಳು ದಾಖಲಾಗಿವೆ. ಆರೋಪಿಗೆ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.