DAKSHINA KANNADA
ಅಮಾಯಕರ ಬಲಿಗೆ ಸಿದ್ದವಾಗಿವೆ ಪುತ್ತೂರಿನಲ್ಲಿರುವ ಹಳೆಯ ಕಟ್ಟಡಗಳು

ಅಮಾಯಕರ ಬಲಿಗೆ ಸಿದ್ದವಾಗಿವೆ ಪುತ್ತೂರಿನಲ್ಲಿರುವ ಹಳೆಯ ಕಟ್ಟಡಗಳು
ಪುತ್ತೂರು ಜನವರಿ 29: ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಗೆ ಗಟ್ಟಿಮುಟ್ಟಾಗಿ ಕಟ್ಟಿರುವ ಕಟ್ಟಡಗಳೇ ನೆಲ ಸಮವಾಗುತ್ತಿವೆ. ಈ ನಡುವೆ ಪುತ್ತೂರಿನ ನಗರದಲ್ಲಿರುವ ಹಳೆಯ ಕಟ್ಟಡಗಳು ಯಾವ ಲೆಕ್ಕ..? ಇನ್ನೇನು ಬೀಳುವ ಹಂತದಲ್ಲಿರುವ ಈ ಕಟ್ಟಡಗಳಲ್ಲಿ ಈಗಲೂ ವ್ಯಾಪಾರ ನಡೆಸಲಾಗುತ್ತಿದ್ದು, ಅಮಾಯಕರ ಬಲಿಗೆ ಈ ಹಳೆಯ ಕಟ್ಟಡಗಳು ಕಾಯುತ್ತಿವೆ.
ಜಿಲ್ಲಾ ಕೇಂದ್ರವಾಗಿ ಬೆಳೆಯುತ್ತಿರುವ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಗರಕ್ಕೆ ಹಳೆಯ ಕಟ್ಟಡಗಳು ಮುಳುವಾಗುವ ಲಕ್ಷಣ ಕಂಡು ಬರಲಾರಂಭಿಸಿದೆ. ಇಲ್ಲಿನ ಮುಖ್ಯ ರಸ್ತೆಯ ಅಸುಪಾಸಿನಲ್ಲಿ ಇರುವ ಕೆಲವೊಂದು ಓಬೀರಾಯನ ಕಾಲದ ಕಟ್ಟಡಗಳು ಇಂದೋ, ನಾಳೆಯೋ ಕುಸಿದು ಬೀಳುವ ಹಂತದಲ್ಲಿದೆ. ಈ ಕಟ್ಟಡಗಳ ಛಾವಣಿ ಹಾಗೂ ಗೋಡೆಗಳು ಕುಸಿದ ಹಲವರಿಗೆ ಗಂಭೀರ ಗಾಯಗಳೂ ಆಗಿದ್ದು, ಇವುಗಳನ್ನು ಇದೇ ಸ್ಥಿತಿಯಲ್ಲಿ ಮುಂದುವರಿಸಿದ್ದೇ ಆದಲ್ಲಿ ಭಾರೀ ಪ್ರಾಣಾಪಾಯಕ್ಕೂ ಕಾರಣವಾಗಲಿದೆ.

ಪುತ್ತೂರು ನಗರದ ಮಧ್ಯಭಾಗದಲ್ಲಿ ಇನ್ನೂ ಕೂಡಾ ಓಬೀರಾಯನ ಕಾಲದ ಹಲವು ಕಟ್ಟಡಗಳು ತಲೆಬಾಗಿಸಿಕೊಂಡು ನಿಂತಿವೆ. ಯಾವ ಸಮಯದಲ್ಲಿ ಈ ಕಟ್ಟಡಗಳು ಧರೆಗುರುಳಲಿದೆ ಎನ್ನುವುದನ್ನು ಅಂದಾಜಿಸೋದು ಕಷ್ಟ. ಇಂಥಹ ಅಪಾಯಕಾರಿ ಸ್ಥಿತಿಯಲ್ಲಿರುವ ಕಟ್ಟಡಗಳನ್ನು ತಕ್ಷಣವೇ ತೆರವುಗೊಳಿಸಬೇಕು ಎನ್ನುವ ಹಲವು ಮನವಿಗಳು ಸಾರ್ವಜನಿಕರ ಮೂಲಕ ಅಧಿಕಾರಿಗಳಿಗೆ ನೀಡಲಾಗಿದೆ.
ಆದರೆ ಇಷ್ಟರವರಗೂ ಇವುಗಳ ತೆರವು ಕಾರ್ಯಾಚರಣೆಗೆ ಗಳಿಗೆ ಕೂಡಿ ಬಂದಿಲ್ಲ. ರಸ್ತೆ ಪಕ್ಕದಲ್ಲೇ ಈ ಕಟ್ಟಡಗಳ ಅಡಿಯಿಂದ ಸಾಗುವ ಜನ ಹಾಗೂ ವಾಹನಗಳಿಗೆ ಹಲವು ಬಾರಿ ಛಾವಣಿಯ ಹೆಂಚು ಹಾಗೂ ಗೋಡೆ ಕುಸಿದು ಗಂಭೀರವಾಗಿ ಗಾಯಗೊಂಡ ಘಟನೆಗಳೂ ನಡೆದಿವೆ.
ಅಪಾಯಕಾರಿ ಎಂದು ಗುರುತಿಸಲಾಗಿರುವ ಹಲವಾರು ಕಟ್ಟಡಗಳು ಪುತ್ತೂರು ನಗರದಲ್ಲಿವೆ. ಆದರೆ ಈ ಕಟ್ಟಡಗಳನ್ನು ತೆರವುಗೊಳಿಸುವಂತೆ ಸೂಚನೆ ನೀಡಿದ ತಕ್ಷಣವೇ ನ್ಯಾಯಾಲಯಕ್ಕೆ ತೆರಳಿ ತಡೆ ಪಡೆಯಲಾಗುತ್ತದೆ. ಇಂಥಹ ಅಪಾಯಕಾರಿ ಕಟ್ಟಡಗಳಲ್ಲಿ ಈಗಲೂ ವ್ಯಾಪಾರ ನಡೆಸಲಾಗುತ್ತಿದೆ. ಯಾವ ಸಮಯದಲ್ಲಿ ಇಡೀ ಕಟ್ಟಡವೇ ಧರೆಗುರುಳಿ ಬೀಳಬಹುದು ಎನ್ನುವುದನ್ನು ಊಹಿಸಲೂ ಅವಕಾಶ ಮಾಡಿಕೊಡದ ಇಂಥ ಕಟ್ಟಡಗಳು ಮುಂದಿನ ದಿನಗಳಲ್ಲಿ ರಸ್ತೆ ಬದಿ ಹೋಗುವ ಜನರ ಮೇಲೆ ಬಿದ್ದು ಪ್ರಾಣಾಪಾಯಕ್ಕೂ ಕಾರಣವಾಗಲಿದೆ.
ಕಟ್ಟಡಗಳ ಮಾಲಕತ್ವ ಹಾಗೂ ಇತರ ವಿಚಾರಗಳಿಗಾಗಿ ಕಟ್ಟಡಗಳನ್ನು ಯಾರೂ ಮುಟ್ಟದಂತೆ ನ್ಯಾಯಾಲಯಗಳು ಆದೇಶ ನೀಡುತ್ತಿವೆ . ಆದರೆ ಕಟ್ಟಡಗಳು ಮಾತ್ರ ದಿನದಿಂದ ದಿನಕ್ಕೆ ಶಿಥಿಲಗೊಂಡು ಅಮಾಯಕರ ಬಲಿ ಪಡೆಯಲು ಸಿದ್ಧವಾಗಿ ನಿಂತಿವೆ. ಜಿಲ್ಲಾಡಳಿತ ಇನ್ನಾದರೂ ಈ ಬಗ್ಗೆ ಗಮನಹರಿಸಿ ಮುಂದಾಗುವ ಅನಾಹುತವನ್ನು ತಪ್ಪಿಸಬೇಕಿದೆ.