DAKSHINA KANNADA
ವಿದೇಶಗಳಿಂದ ಅಡಿಕೆ ಆಮದು ಕರಾವಳಿ ಅಡಿಕೆ ಬೆಳೆಗಾರರಿಗೆ ಮಾರಕ- ಕಾವು ಹೇಮನಾಥ ಶೆಟ್ಟಿ
ಪುತ್ತೂರು, ಅಕ್ಟೋಬರ್ 18: ಭೂತಾನ್ ನಿಂದ 17 ಸಾವಿರ ಟನ್ ಅಡಿಕೆಯನ್ನು ಆಮದು ಮಾಡಿಕೊಳ್ಳುವ ಮೂಲಕ ಕೇಂದ್ರ ಸರಕಾರ ಕರಾವಳಿಯ ಅಡಿಕೆ ಬೆಳೆಗಾರರ ಹಿತಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಕೆ.ಪಿ.ಸಿ.ಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಆರೋಪಿಸಿದರು.
ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅಡಿಕೆ ಬೆಲೆ 500 ರೂಪಾಯಿ ಗಡಿ ದಾಟಿದರೂ, ಉತ್ಪಾದನಾ ವೆಚ್ಚ ಇದಕ್ಕಿಂತಲೂ ಜಾಸ್ತಿಯಾಗಿದೆ. ಗೊಬ್ಬರ ಸೇರಿದಂತೆ ಎಲ್ಲಾ ಸಾಮಾಗ್ರಿಗಳ ಬೆಲೆಯೂ ಹೆಚ್ಚಾಗಿದ್ದು, ಅಡಿಕೆಗೆ ಇನ್ನಷ್ಟು ಬೆಲೆ ಏರಿಸುವ ಅಗತ್ಯವಿದೆ ಎಂದ ಅವರು ಉತ್ಪಾದನಾ ವೆಚ್ಚದಿಂದ ಕಂಗೆಟ್ಟಿರುವ ಈ ಸಂದರ್ಭದಲ್ಲಿ ಕೇಂದ್ರ ಸರಕಾರ ಭೂತಾನ್ ಸೇರಿದಂತೆ ವಿದೇಶಗಳಿಂದ ಅಡಿಕೆಯನ್ನು ಆಮದು ಮಾಡಲು ಮುಂದಾಗಿದೆ.
ಇದರಿಂದಾಗಿ ಕರಾವಳಿಯಲ್ಲಿ ಬೆಳೆಯುವ ಅಡಿಕೆಯ ಬೆಲೆಯಲ್ಲಿ ಏರಿಳಿತವಾಗಲಿದೆ. ಗೃಹ ಸಚಿವ ಅಮಿತ್ ಶಾ ಮಗ ಜಯ ಶಾ ಆಡಳಿತದ ಕಂಪನಿ ಈ ರೀತಿಯ ಆಮದು ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದು, ಇದನ್ನು ಪ್ರಶ್ನಿಸುವ ತಾಕತ್ತೂ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್, ಉಡುಪಿ-ಚಿಕ್ಕಮಗಳೂರು ಶೋಭಾ ಕರಂದ್ಲಾಜೆಯವರಿಗಿಲ್ಲ ಎಂದರು. ಕೇಂದ್ರ ಸರಕಾರ ತಕ್ಷಣವೇ ಈ ಆಮದು ಪ್ರಕ್ರಿಯೆಯನ್ನು ನಿಲ್ಲಿಸಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಆಗ್ರಹಿಸಿದರು.