LATEST NEWS
ಪರಿಶಿಷ್ಟ ಜಾತಿ ಮತ್ತು ಗಿರಿಜನ ಉಪ ಯೋಜನೆ ಸಾಧನೆ ತೋರದ ಗ್ರಾಮಪಂಚಾಯತ್ ಗಳಿಗೆ ನೋಟಿಸ್
ಪರಿಶಿಷ್ಟ ಜಾತಿ ಮತ್ತು ಗಿರಿಜನ ಉಪ ಯೋಜನೆ ಸಾಧನೆ ತೋರದ ಗ್ರಾಮಪಂಚಾಯತ್ ಗಳಿಗೆ ನೋಟಿಸ್
ಉಡುಪಿ, ಜನವರಿ 31: ಜಿಲ್ಲೆಯ ಎಲ್ಲಾ ಪಂಚಾಯತ್ ಗಳು ತಮ್ಮ ಪಂಚಾಯತ್ ನಿಧಿಯಲ್ಲಿ ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪ ಯೋಜನೆಗೆ ನಿಗಧಿಪಡಿಸಲಾಗಿರುವ ಅನುದಾನದಲ್ಲಿ ಇದುವರೆಗೆ ಶೇಕಡ 50 ಕ್ಕಿಂತ ಕಡಿಮೆ ಸಾಧನೆ ತೋರಿರುವ ಪಂಚಾಯತ್ ಗಳಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗೆ ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಸೂಚಿಸಿದ್ದಾರೆ.
ಅವರು ಗುರುವಾರ, ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪ ಯೋಜನೆಯಡಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ನಿಗಧಿತ ಸಾಧನೆ ನಡೆದಿಲ್ಲ, ಈಗಾಗಲೇ ಆರ್ಥಿಕ ವರ್ಷ ಮುಕ್ತಾಯದ ಹಂತದಲ್ಲಿದ್ದು, ಇದುವರೆಗೂ ನಿರೀಕ್ಷಿತ ಸಾಧನೆ ಮಾಡದ ಕಾರಣ ಅಸಮದಾನ ವ್ಯಕ್ತಪಡಿಸಿದ ಅಪರ ಜಿಲ್ಲಾಧಿಕಾರಿ, ಶೇ.50 ಕ್ಕಿಂತ ಕಡಿಮೆ ಪ್ರಗತಿ ಸಾಧಿಸಿರುವ ಗ್ರಾಮ ಪಂಚಾಯತ್ಗಳಿಗೆ ಕಾರಣ ಕೇಳಿ ನೋಟಿಸ್ ನೀಡಲು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗೆ ಸೂಚಿಸಿದರಲ್ಲದೇ, ಎಲ್ಲಾ ಗ್ರಾಮ ಪಂಚಾಯತ್ಗಳು ಆರ್ಥಿಕ ವರ್ಷ ಮುಕ್ತಾಯದೊಳಗೆ ಸಂಪೂರ್ಣ ಗುರಿ ಸಾಧಿಸುವ ಬಗ್ಗೆ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಎಲ್ಲಾ ಇಲಾಖೆಗಳು ನಿಗಧಿಪಡಿಸಿದ ಆರ್ಥಿಕ ಮತ್ತು ಭೌತಿಕ ಗುರಿಯನ್ನು ಮಾರ್ಚ್ ಅಂತ್ಯದ ಒಳಗೆ ಸಂಪೂರ್ಣವಾಗಿ ಸಾಧಿಸುವಂತೆ ಹಾಗೂ ಯಾವುದೇ ಕಾರಣಕ್ಕೂ ಯೋಜನೆಯ ಹಣ ವ್ಯರ್ಥವಾಗದಂತೆ ಪ.ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ಸೌಲಭ್ಯಗಳನ್ನು ಒದಗಿಸುವಂತೆ ಅಪರ ಜಿಲ್ಲಾಧಿಕಾರಿ ಸೂಚಿಸಿದರು.