LATEST NEWS
ಸಮಬಲ ಹೋರಾಟ – ದಕ್ಷಿಣಕನ್ನಡದಲ್ಲಿ ರಾಜಕೀಯ ಪಕ್ಷಗಳಿಗೆ ತಲೆನೋವಾಗಲಿದೆಯಾ ಸೌಜನ್ಯ ನೋಟಾ ಅಭಿಯಾನ…!!
ಮಂಗಳೂರು ಎಪ್ರಿಲ್ 24: ದಕ್ಷಿಣಕನ್ನಡ ಜಿಲ್ಲೆಯ ಲೋಕಸಭೆ ಚುನಾವಣೆಯ ಕೊನೆ ಹಂತಕ್ಕೆ ಬಂದಿದ್ದು. ಎಪ್ರಿಲ್ 26 ರಂದು ಮತದಾನ ನಡೆಯಲಿದೆ. ಈ ಬಾರಿ ಪೈಪೋಟಿ ಹಂತದಲ್ಲಿರುವ ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಸೌಜನ್ಯ ಪರ ನೋಟಾ ಅಭಿಯಾನ ಸಕತ್ ಸದ್ದು ಮಾಡುತ್ತಿದೆ.
ಕಳೆದ ಮೂರು ದಶಕಗಳಿಂದ ಬಿಜೆಪಿಯ ಭದ್ರಕೊಟೆಯಾಗಿರುವ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೇಸ್ ಹಾಗೂ ಬಿಜೆಪಿ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ. ಈ ಮೊದಲು ಬಹುತೇಕ ಬಿಜೆಪಿ ಕಡೆ ವಾಲುತ್ತಿದ್ದ ಸಮೀಕ್ಷೆಗಳು ಈ ಬಾರಿ 50-50ಗೆ ಬಂದು ನಿಂತಿದೆ.
ಸುಮಾರು 18 ಲಕ್ಷ ಮತದಾರರಿರುವ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಈ ಭಾರಿ ಮತದಾರ ಯಾರಿಗೆ ಒಲಿಯಲಿದ್ದಾನೆ ನೋಡಬೇಕು. ಕ್ಯಾಪ್ಟನ್ ಬ್ರಿಜೇಶ್ ಚೌಟಾ (ಬಿಜೆಪಿ) ಮತ್ತು ಪದ್ಮರಾಜ್ ಆರ್ (ಕಾಂಗ್ರೆಸ್) ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದಾರೆ. ಈ ವಿಭಾಗದಲ್ಲಿ 1,876 ಮತಗಟ್ಟೆಗಳಿವೆ. ಮೊದಲ ಬಾರಿಗೆ ಇಬ್ಬರು ಅಭ್ಯರ್ಥಿಗಳು ಚುನಾವಣಾ ಕಣಕ್ಕೆ ಇಳಿಯುತ್ತಿರುವ ಕಾರಣ ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಈ ಜಿದ್ದಾಜಿದ್ದಿನ ನಡುವೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸದ್ದು ಮಾಡುತ್ತಿರುವ ಮತ್ತೊಂದು ವಿಷಯ ಸೌಜನ್ಯ, ವಿಧ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನ್ಯಾಯ ಒದಗಿಸಲು ಕಾಂಗ್ರೆಸ್ ಮತ್ತು ಬಿಜೆಪಿ ವಿಫಲವಾಗಿದೆ ಎಂದು ಆರೋಪಿಸಿ ಕಾರ್ಯಕರ್ತ ಮಹೇಶ ಶೆಟ್ಟಿ ತಿಮರೋಡಿ ಮತ್ತು ತಂಡ ಜಿಲ್ಲೆಯಾದ್ಯಂತ ಪ್ರಚಾರ ನಡೆಸುತ್ತಿದೆ.
ಮಹೇಶ್ ಶೆಟ್ಟಿ ತಿಮರೋಡಿ ತಂಡ ಬಹುತೇಕ ಒಂದು ಪಕ್ಷದ ಚುನಾವಣಾ ಪ್ರಚಾರದಂತೆ ನೋಟಕ್ಕಾಗಿ ಅಭಿಯಾನ ನಡೆಸಿದ್ದು, ಎರಡೂ ಪಕ್ಷಗಳಿಗೆ ನಿದ್ದೆಗೆಡಿಸಿದೆ. ಒಂದು ವೇಳೆ ನೋಟಾ ಅತಿ ಹೆಚ್ಚು ಚಲಾವಣೆ ಆದರೆ ಅದು ಬಿಜೆಪಿಯ ಮುನ್ನಡೆಯನ್ನು ಕಡಿಮೆ ಮಾಡಬಹುದು ಎನ್ನುವ ಲೆಕ್ಕಾಚಾರ ಇದೆ.
ಒಟ್ಟಾರೆ ಸೌಜನ್ಯ ಪರ ಹೋರಾಟ ಸದ್ದು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಾಗಿದೆ. ನೋಟಾ ಮೂಲಕ ಇಡೀ ದೇಶದ ಗಮನ ಸೆಳೆಯಲು ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಅವರ ತಂಡ ಹೋರಾಟ ಮಾಡುತ್ತಿದ್ದು. ಯಾವ ರೀತಿಯ ಯಶಸ್ಸು ಸಿಗಲಿದೆ ಎನ್ನುವುದು ಕಾದು ನೋಡಬೇಕಾಗಿದೆ.