LATEST NEWS
ನೋಯ್ಡಾದ ಸೂಪರ್ಟೆಕ್ ಅವಳಿ ಗೋಪುರಗಳು ನೆಲಸಮ
ಹೊಸದಿಲ್ಲಿ, ಆಗಸ್ಟ್ 28: ಕುತುಬ್ ಮಿನಾರ್ ಗಿಂತ ಎತ್ತರದ ನೋಯ್ಡಾದ ಸೂಪರ್ಟೆಕ್ ಅವಳಿ ಗೋಪುರಗಳನ್ನು 3,700 ಕೆಜಿ ಸ್ಫೋಟಕಗಳನ್ನು ಬಳಸಿ ರವಿವಾರ ಮಧ್ಯಾಹ್ನ ನೆಲಸಮಗೊಳಿಸಲಾಗಿದೆ.
ನೋಯ್ಡಾದ 93 ಎ ಸೆಕ್ಟರ್ ನಲ್ಲಿರುವ ಕಟ್ಟಡ ನೆಲಸಮ ಕಾರ್ಯಾಚರಣೆಯು ಕೇವಲ 9 ಸೆಕೆಂಡ್ ನಡೆದಿದೆ. ಕಟ್ಟಡ ಧ್ವಂಸಗೊಳಿಸುವಿಕೆಯಿಂದ ಉತ್ಪತ್ತಿಯಾಗುವ ಕಟ್ಟಡಗಳ ಅವಶೇಷಗಳನ್ನು ಸ್ವಚ್ಛಗೊಳಿಸುವುದು ನೋಯ್ಡಾ ಅಧಿಕಾರಿಗಳಿಗೆ ದೊಡ್ಡ ಸವಾಲಾಗಿದೆ. ಕಾರ್ಯಾಚರಣೆಯಲ್ಲಿ ತೊಡಗಿರುವ ಅಧಿಕಾರಿಗಳು ಸುಮಾರು 55,000 ಟನ್‌ಗಳಷ್ಟು ಅವಶೇಷಗಳು ಉತ್ಪತ್ತಿಯಾಗುತ್ತವೆ ಎಂದು ಈ ಹಿಂದೆ ಹೇಳಿದ್ದರು. ಅವಶೇಷಗಳನ್ನು ತೆರವುಗೊಳಿಸಲು ಮೂರು ತಿಂಗಳು ಬೇಕಾಗಬಹುದು. ತ್ಯಾಜ್ಯವನ್ನು ನಿಗದಿತ ಜಾಗದಲ್ಲಿ ಸುರಿಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೂಪರ್ ಟೆಕ್ ಬಿಲ್ಡರ್ ಅಕ್ರಮವಾಗಿ ನೋಯ್ಡಾದಲ್ಲಿ ಅವಳಿ ಗೋಪುರಗಳನ್ನು ನಿರ್ಮಿಸಿದ್ದು ಅವುಗಳನ್ನು ಕೆಡವಬೇಕೆಂದು ಸುಪ್ರೀಂಕೋರ್ಟ್ ಕಳೆದ ವರ್ಷದ ಆಗಸ್ಟ್ ನಲ್ಲಿ ತೀರ್ಪು ನೀಡಿತು. ಗೋಪುರಗಳನ್ನು ಕೆಡವಲು ಸುಪ್ರೀಂಕೋರ್ಟ್ ಮೂರು ತಿಂಗಳ ಕಾಲಾವಕಾಶ ನೀಡಿತ್ತು. ಆದರೆ ತಾಂತ್ರಿಕ ತೊಂದರೆಗಳಿಂದಾಗಿ ಒಂದು ವರ್ಷ ತೆಗೆದುಕೊಂಡಿದೆ. ನೋಯ್ಡಾ ಅಧಿಕಾರಿಗಳೊಂದಿಗೆ ಶಾಮೀಲಾಗಿ ಬಿಲ್ಡರ್ ಕಟ್ಟಡದ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸೂಪರ್ ಟೆಕ್ ಎಮರಾಲ್ಡ್ ಕೋರ್ಟ್ ಸೊಸೈಟಿಯ ನಿವಾಸಿಗಳು 2012 ರಲ್ಲಿ ಅಲಹಾಬಾದ್ ಹೈಕೋರ್ಟಿಗೆ ತೆರಳಿ ಕಟ್ಟಡ ನಿರ್ಮಾಣವು ಅಕ್ರಮವಾಗಿದೆ ಎಂದು ಹೇಳಿದ್ದರು. ಆ ನಂತರ ಸುಪ್ರೀಂಕೋರ್ಟ್ ಕದ ತಟ್ಟಿದ್ದರು. ನೋಯ್ಡಾ ಸೂಪರ್ ಟೆಕ್ ಅವಳಿ ಗೋಪುರಗಳ ಸಮೀಪವಿರುವ ಎರಡು ಸೊಸೈಟಿಗಳ ಎಲ್ಲಾ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಎರಡು ಸೊಸೈಟಿಗಳಲ್ಲಿ ಅಡುಗೆ ಅನಿಲ ಹಾಗೂ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.