LATEST NEWS
ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಸ್ಪಾಟ್ ಬುಕ್ಕಿಂಗ್ ನಿಲ್ಲಿಸಿದ ಕೇರಳ ಸರಕಾರ – ಮತ್ತೊಂದು ಹೋರಾಟಕ್ಕೆ ಕಾರಣವಾಗಲಿದೆಯಾ ಶಬರಿಮಲೆ
ಕೇರಳ ಅಕ್ಟೋಬರ್ 15:ಶಬರಿಮಲೆಯಲ್ಲಿ ನಡೆಯುವ ವಾರ್ಷಿಕ ಮಂಡಲ-ಮಕರವಿಳಕ್ಕು ಋತುವಿನಲ್ಲಿ ಅಯ್ಯಪ್ಪನ ದರ್ಶಕ್ಕೆ ಆನ್ ಲೈನ್ ಬುಕ್ಕಿಂಗ್ ಕಡ್ಡಾಯಗೊಳಿಸಲಾಗಿದೆ. ಅಲ್ಲದೆ ಈ ಹಿಂದೆ ಇದ್ದ ಸ್ಪಾಟ್ ಬುಕ್ಕಿಂಗ್ ವ್ಯವಸ್ಥೆಯನ್ನು ನಿಲ್ಲಿಸಲಾಗಿದ್ದು, ಇದು ಈಗ ವಿರೋಧಕ್ಕೆ ಕಾರಣವಾಗಿದೆ. ಶಬರಿಮಲೆ ಈ ಬಾರಿ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ಈ ಹಿಂದೆ ಎಲ್ಲಾ ವಯೋಮಾನದ ಮಹಿಳೆಯರಿಗೆ ದರ್ಶನಕ್ಕೆ ಅವಕಾಶ ನೀಡಿ ಸುಪ್ರೀಂಕೋರ್ಟ್ ಆದೇಶದ ಬೆನ್ನಲ್ಲೇ ನಡೆದ ಹೋರಾಟದ ಬಳಿಕ ಇದೀಗ ಅಯ್ಯಪ್ಪನ ದರ್ಶನಕ್ಕಾಗಿ ಭಕ್ತರು ಮತ್ತೆ ಹೋರಾಟಕ್ಕೆ ಇಳಿದಿದ್ದಾರೆ.
ಈ ಬಾರಿ ಅಯ್ಯಪ್ಪನ ದರ್ಶನಕ್ಕೆ ಆನ್ಲೈನ್ ಬುಕ್ಕಿಂಗ್ ನ್ನು ಕಡ್ಡಾಯಗೊಳಿಸಿದ್ದು, ಸ್ಪಾಟ್ ಬುಕ್ಕಿಂಗ್ ನ್ನು ಕ್ಯಾನ್ಸಲ್ ಮಾಡಿ ಕೇರಳ ಸರಕಾರ ಆದೇಶಿಸಿದೆ. ಇದು ಅಯ್ಯಪ್ಪನ ಭಕ್ತರ ವಿರೋಧಕ್ಕೆ ಕಾರಣವಾಗಿದೆ.
ಆದರೂ ವಾರ್ಷಿಕ ಮಂಡಲ-ಮಕರವಿಳಕ್ಕು ಋತುವಿನಲ್ಲಿ ಎಲ್ಲಾ ಅಯ್ಯಪ್ಪ ಭಕ್ತರಿಗೆ ಭಗವಾನ್ ಅಯ್ಯಪ್ಪನ ದರ್ಶನವನ್ನು ನೀಡಲಾಗುವುದು ಎಂದು ತಿರುವಾಂಕೂರು ದೇವಸ್ತಾನಂ ಮಂಡಳಿ (ಟಿಡಿಬಿ) ತಿಳಿಸಿದೆ. ಭಕ್ತರು ತಮ್ಮ ದರ್ಶನ ಟಿಕೆಟ್‌ಗಳು ಮತ್ತು ಪ್ರಸಾದಗಳನ್ನು ಆನ್‌ಲೈನ್‌ನಲ್ಲಿ ಕಾಯ್ದಿರಿಸಲು ಶಬರಿಮಲೆ ದೇವಸ್ಥಾನದ ಅಧಿಕೃತ ವೆಬ್‌ಸೈಟ್ ಮೂಲಕ ವರ್ಚುವಲ್ ಕ್ಯೂ ವ್ಯವಸ್ಥೆಯನ್ನು ಬಳಸಬೇಕೆಂದು ತಿಳಿಸಿದೆ. ಪ್ರತಿದಿನ 80 ಸಾವಿರ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಟಿಡಿಬಿ ಹೇಳಿದೆ.
ಅಲ್ಲದೆ ಈ ಬಾರಿ ಶಬರಿಮಲೆ ಅಯ್ಯಪ್ಪ ಸ್ವಾಮಿಯ ದರ್ಶನದ ಸಮಯವನ್ನು ಈ ವರ್ಷ ವಿಸ್ತರಿಸಲಾಗಿದೆ ಎಂದು ತಿರುವಾಂಕೂರು ದೇವಸ್ತಾನಂ ಮಂಡಳಿ ಅಧ್ಯಕ್ಷ ಪಿ.ಎಸ್.ಪ್ರಶಾಂತ್ ಘೋಷಿಸಿದ್ದಾರೆ. ದೇವಸ್ಥಾನದ ಪ್ರಧಾನ ಅರ್ಚಕರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿವರಿಸಿದರು. ದರ್ಶನ ಸಮಯ: ಶಬರಿಮಲೆಯಲ್ಲಿ ಅಯ್ಯಪ್ಪನ ದರ್ಶನವು ಮುಂಜಾನೆ 3 ರಿಂದ ಮಧ್ಯಾಹ್ನ 1 ರವರೆಗೆ ಮತ್ತು ಮಧ್ಯಾಹ್ನ 3 ರಿಂದ ರಾತ್ರಿ 11 ರವರೆಗೆ ಮುಂದುವರಿಯುತ್ತದೆ. ಈ ಬದಲಾವಣೆಗಳ ಮೂಲಕ ಭಕ್ತರಿಗೆ ದರ್ಶನಕ್ಕೆ 17 ಗಂಟೆಗಳ ಹೆಚ್ಚಿನ ಸಮಯ ಸಿಗಲಿದೆ ಎಂದರು.
ಈ ವರ್ಷ ಅಯ್ಯಪ್ಪ ಸ್ವಾಮಿ ಮಂಡಲ ಪೂಜಾ ಮಹೋತ್ಸವವು ನವೆಂಬರ್ 15 ರಿಂದ ಡಿಸೆಂಬರ್ 26 ರವರೆಗೆ ನಡೆಯಲಿದೆ. ಜನವರಿ 15 ರಂದು ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಮಕರ ಜ್ಯೋತಿ ಕಂಡುಬರುತ್ತದೆ. ಈ ಬಾರಿ ಶಬರಿಮಲೆಗೆ ಬರುವ ಭಕ್ತರು ಆನ್‌ಲೈನ್‌ನಲ್ಲಿ ಮಾತ್ರ ಬುಕ್ ಮಾಡಬೇಕು ಎಂದು ಕೇರಳ ಸರ್ಕಾರ ಸ್ಪಷ್ಟಪಡಿಸಿದೆ. ಸ್ಪಾಟ್ ಬುಕಿಂಗ್ ಇರುವುದಿಲ್ಲ ಎಂದು ಹೇಳಿದೆ. ಆನ್‌ಲೈನ್ ಬುಕ್ಕಿಂಗ್ ಮಾಡಿದ ಭಕ್ತರಿಗೆ 48 ಗಂಟೆಗಳ ಕಾಲಾವಕಾಶ ನೀಡಲಾಗುವುದು. ದಿನಕ್ಕೆ ಗರಿಷ್ಠ 80,000 ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲು ತಿರುವಾಂಕೂರು ದೇವಸ್ತಾನಂ ಮಂಡಳಿ ನಿರ್ಧರಿಸಿದೆ.
ಈ ನಡುವೆ ಶಬರಿಮಲೆಯಲ್ಲಿ ಇನ್ನು ‘ಸ್ಪಾಟ್ ಬುಕಿಂಗ್’ ಇರುವುದಿಲ್ಲ ಎಂದು ಕೇರಳ ಮುಜರಾಯಿ ಸಚಿವ ವಿ.ಎನ್. ವಾಸವನ್ ಭಾನುವಾರ ಸ್ಪಷ್ಟಪಡಿಸಿದ್ದಾರೆ. ಆದರೆ, ಸ್ಪಾಟ್ ಬುಕಿಂಗ್ ಇಲ್ಲದಿದ್ದರೂ ಇಲ್ಲಿಗೆ ಬರುವ ಯಾವುದೇ ಭಕ್ತ ದರ್ಶನದಿಂದ ವಂಚಿತನಾಗುವುದಿಲ್ಲ ಎಂದು ಅಭಯ ನೀಡಿದ್ದಾರೆ.
ಆದರೂ ಭಕ್ತರ ದರ್ಶನಕ್ಕೆಬುಕಿಂಗ್ ಸ್ಲಾಟ್ಸ್ ಪಡೆಯಲು ಅಕ್ಷಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ‘ಇಡತಾವಳಂ’ (ದೇವಸ್ಥಾನದ ಮಾರ್ಗದಲ್ಲಿ ಇರುವ ವಿಶ್ರಾಂತಿ ಅಥವಾ ನಿರೀಕ್ಷಣಾ ಪ್ರದೇಶ) ಎಂಬಲ್ಲಿ ಅಕ್ಷಯ ಕೇಂದ್ರಗಳನ್ನು ಸ್ಥಾಪಿಸಿ, ಭಕ್ತರಿಗೆ ಬುಕಿಂಗ್ ಸ್ಲಾಟ್ಸ್ ಪಡೆಯಲು ಅನುಕೂಲ ಮಾಡಿಕೊಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.