DAKSHINA KANNADA
55 ದಿನಗಳಿಂದ ಸಂಬಳ ಇಲ್ಲದೆ ಕೆಲಸ ನಿರ್ವಹಿಸುತ್ತಿರುವ ಕೆಎಸ್ಆರ್ ಟಿಸಿ ಸಿಬ್ಬಂದಿ..!!

ಪುತ್ತೂರು ಅಕ್ಟೋಬರ್ 07:ಪುತ್ತೂರು ಕೆಎಸ್ಆರ್ ಟಿಸಿ ನೌಕರರಿಗೆ ಕಳೆದ 55 ದಿನಗಳಿಂದ ಸಂಬಳ ಸಿಗದೇ ಸಂಕಷ್ಟಕ್ಕೆ ಸಿಲುಕಿದ್ದು, ಕೆ.ಎಸ್.ಆರ್.ಟಿ.ಸಿ ಕೇಂದ್ರ ಕಛೇರಿಯ ನಿರ್ಲಕ್ಷ್ಯ ಧೋರಣೆ ಖಂಡಿಸಿ ಪುತ್ತೂರು ಕೆ.ಎಸ್.ಆರ್.ಟಿ.ಸಿ ಘಟಕದ ಬಿಎಂಎಸ್ ಸಂಘಟನೆ ಧರಣಿ ನಡೆಸಲು ನಿರ್ಧರಿಸಿದೆ.
ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಸಂಘಟನೆಯ ಪ್ರಧಾನ ವಕ್ತಾರ ಶಾಂತರಾಮ್ ವಿಟ್ಲ ಪುತ್ತೂರು ಕೆಎಸ್ ಆರ್ ಟಿಸಿ ವಿಭಾಗದ ನೌಕರರಿಗೆ ಸರಿಯಾಗಿ ಸಂಬಳ ಸಿಗದೇ ಸಂಕಷ್ಟಕ್ಕೆ ಒಳಗಾಗಿದ್ದು, 55 ದಿನಗಳಿಂದ ಯಾವುದೇ ಸಂಬಳವಿಲ್ಲದೆ ಕೆಲಸ ನಿರ್ವಹಿಸುತ್ತಿದ್ದಾರೆ. ರಾಜ್ಯದೆಲ್ಲೆಡೆ ಇದೇ ಪರಿಸ್ಥಿತಿಯಲ್ಲಿ ಕೆ.ಎಸ್.ಆರ್.ಟಿ.ಸಿ ನೌಕರರು ಇದ್ದಾರೆ.

ಆದರೆ ರಾಜ್ಯದ ಯಾವ ಘಟಕಗಳೂ ಈ ಬಗ್ಗೆ ಧ್ವನಿ ಎತ್ತಿಲ್ಲ , ಆದರೆ ನಮಗೆ ಹಸಿವಿದೆ, ಈ ಕಾರಣಕ್ಕಾಗಿ ಧರಣಿಗೆ ಮುಂದಾಗಿದ್ದೇವೆ ಎಂದ ಅವರು ಅಕ್ಟೋಬರ್ 21 ರಿಂದ ಧರಣಿ ಆರಂಭಗೊಳ್ಳಲಿದೆ ಆದರೆ ಬಸ್ ಗಳ ಓಡಾಟಕ್ಕೆ ಯಾವುದೇ ತೊಂದರೆ ಮಾಡದೆ ಧರಣಿ ನಡೆಸಲಿದ್ದೇವೆ ಎಂದರು. ಸರಕಾರ ಸೂಕ್ತ ಕ್ರಮ ಕೈಗೊಳ್ಳದೇ ಹೋದಲ್ಲಿ ಉಪವಾಸ ಸತ್ಯಾಗ್ರಹವನ್ನೂ ಆರಂಭಿಸಲಿದ್ದೇವೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.