LATEST NEWS
ಜೂನ್ 16 ರಂದು ಹಿಂದೂ ಸಂಘಟನೆಗಳ ಪ್ರತಿಭಟನೆಗೆ ಅನುಮತಿ ನೀಡಿಲ್ಲ – ಪೊಲೀಸ್ ಇಲಾಖೆ
ಮಂಗಳೂರು ಜೂನ್ 15: ಪ್ರವಾದಿ ಅವರ ಅವಹೇಳನ ಖಂಡಿಸಿ ದೇಶದಾದ್ಯಂತ ನಡೆಯುತ್ತಿರುವ ಮುಸ್ಲಿಂ ಸಂಘಟನೆಗಳ ಪ್ರತಿಭಟನೆಯನ್ನು ವಿರೋಧಿಸಿ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ಮಂಗಳೂರಿನಲ್ಲಿ ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಗೆ ಯಾವುದೇ ಅನುಮತಿ ನೀಡಿಲ್ಲ ಎಂದು ಮಂಗಳೂರು ಕೇಂದ್ರ ಉಪವಿಭಾಗದ ಸಹಾಯಕ ಆಯುಕ್ತರು ಮಾಹಿತಿ ನೀಡಿದ್ದಾರೆ.
ಪ್ರವಾದಿಯವರ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿದವರ ವಿರುದ್ಧ ಪ್ರತಿಭಟನೆ ಹೆಸರಿನಲ್ಲಿ ದೇಶಾದ್ಯಂತ ಹಿಂಸೆ ನಡೆಸಲಾಗುತ್ತಿದ್ದು, ಇದನ್ನು ಖಂಡಿಸಿ ಜೂ.16ರಂದು ಅಪರಾಹ್ನ 3 ಗಂಟೆಗೆ ನಗರದ ಪಿವಿಎಸ್ ವೃತ್ತದ ಬಳ ವಿಶ್ವ ಹಿಂದೂ ಪರಿಷತ್-ಬಜರಂಗ ದಳ ವತಿಯಿಂದ ಪ್ರತಿಭಟನಾ ಸಭೆ ನಡೆಯಲಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಪೋಸ್ಟ್ ವೊಂದು ಹರಿದಾಡುತ್ತಿದೆ. ಇದನ್ನು ಗಮನಿಸಿ ಸಹಾಯಕ ಪೊಲೀಸ್ ಆಯುಕ್ತರು ಈ ಸ್ಪಷ್ಟನೆ ನೀಡಿದ್ದಾರೆ.
ಜೂ.16ರಂದು ಪ್ರತಿಭಟನೆ ನಡೆಸುವ ಕುರಿತು ಪೊಲೀಸ್ ಇಲಾಖೆಗೆ ಅಧಿಕೃತವಾಗಿ ಯಾರೂ ಅನುಮತಿ ಕೋರಿಕೆ ಪತ್ರ ಸಲ್ಲಿಸಿಲ್ಲ. ಆದಾಗ್ಯೂ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಭದ್ರತೆಯ ಹಿತದೃಷ್ಟಿಯಿಂದ ಯಾವುದೇ ರೀತಿಯ ಪ್ರತಿಭಟನೆಯನ್ನು ಮಾಡಲು ಅನುಮತಿ ನೀಡಿರುವುದಿಲ್ಲ ಎಂದು ಸಹಾಯಕ ಪೊಲೀಸ್ ಆಯುಕ್ತರು ಹೇಳಿದ್ದು, ಈ ಬಗ್ಗೆ ಅವರು ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷರಿಗೆ ತಿಳುವಳಿಕೆ ಪತ್ರದ ಮೂಲಕ ಮಾಹಿತಿ ನೀಡಿದ್ದಾರೆ.