LATEST NEWS
ಮಂಗನ ಕಾಯಿಲೆ ಉಡುಪಿ ಜಿಲ್ಲೆಯ ಯಾವುದೇ ರೋಗಿ ದಾಖಲಾಗಿಲ್ಲ – ಮಣಿಪಾಲ ಆಸ್ಪತ್ರೆ

ಮಂಗನ ಕಾಯಿಲೆ ಉಡುಪಿ ಜಿಲ್ಲೆಯ ಯಾವುದೇ ರೋಗಿ ದಾಖಲಾಗಿಲ್ಲ – ಮಣಿಪಾಲ ಆಸ್ಪತ್ರೆ
ಉಡುಪಿ ಜನವರಿ 15: ಕೆಎಂಸಿ ಆಸ್ಪತ್ರೆಗೆ ದಾಖಲಾಗಿರುವ ಶಂಕಿತ ಮಂಗನಕಾಯಿಲೆ ರೋಗಿಗಳಲ್ಲಿ ಉಡುಪಿ ಜಿಲ್ಲೆಯ ಯಾವುದೇ ರೋಗಿ ಇಲ್ಲ ಎಂದು ಮಣಿಪಾಲ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ತಿಳಿಸಿದ್ದಾರೆ.
ಮಣಿಪಾಲ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಮಾತನಾಡಿ, ಮಣಿಪಾಲ ಆಸ್ಪತ್ರೆಯಲ್ಲಿ ಮಂಗನ ಕಾಯಿಲೆಗೆ ಸಂಬಂಧಿಸಿದಂತೆ ಇದುವರೆಗೆ 73 ಶಂಕಿತ ರೋಗಿಗಳು ದಾಖಲಾಗಿದ್ದು, 27 ಪ್ರಕರಣ ದೃಢಪಟ್ಟಿವೆ, ಇದುವರೆಗೆ 50 ಮಂದಿ ಗುಣಮುಖರಾಗಿ ತೆರಳಿದ್ದು, ಪ್ರಸ್ತುತ 23 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಇದರಲ್ಲಿ 12 ಪಾಸಿಟಿವ್ ಮತ್ತು 11 ನೆಗೆಟಿವ್ ರೋಗಿಗಳಿದ್ದಾರೆ ಎಂದು ತಿಳಿಸಿದರು.

ಆಸ್ಪತ್ರೆಯಲ್ಲಿ ಈ ರೋಗಿಗಳ ಚಿಕಿತ್ಸೆಗಾಗಿ, ಮಹಿಳೆಯರು ಮತ್ತು ಪುರುಷರಿಗಾಗಿ ಪ್ರತ್ಯೇಕ ವಾರ್ಡ್ ಮೀಸಲಾಗಿಟ್ಟಿದ್ದು, ಪ್ರೊ. ಡಾ.ಕವಿತಾ ಎಂಬ ಪ್ರತ್ಯೇಕ ವೈದ್ಯರನ್ನು ಚಿಕಿತ್ಸೆ ನೀಡಲು ನಿಯೋಜಿಸಲಾಗಿದ್ದು , ಎಲ್ಲರಿಗೂ ಆರೋಗ್ಯ ಕರ್ನಾಟಕ ಯೋಜನೆಯಡಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ , ಯಾವುದೇ ಮರಣ ಸಂಭವಿಸಿಲ್ಲ ಹಾಗೂ ಉಡುಪಿ ಜಿಲ್ಲೆಯ ಯಾವುದೇ ರೋಗಿ ದಾಖಲಾಗಿಲ್ಲ ಎಲ್ಲಾ ರೋಗಿಗಳು ಶಿವಮೊಗ್ಗದ ಸಾಗರ ತಾಲೂಕಿನವರು ಎಂದು ಹೇಳಿದರು.