UDUPI
ಉಡುಪಿ ಬ್ರಹ್ಮಗಿರಿ ವೃತ್ತದಲ್ಲಿ ವಾಹನ ನಿಲುಗಡೆ ನಿಷೇಧ
ಉಡುಪಿ ಬ್ರಹ್ಮಗಿರಿ ವೃತ್ತದಲ್ಲಿ ವಾಹನ ನಿಲುಗಡೆ ನಿಷೇಧ
ಉಡುಪಿ ಫೆಬ್ರವರಿ 9: ಉಡುಪಿ ನಗರದ ಬ್ರಹ್ಮಗಿರಿ ವೃತ್ತದಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲು ಇಂದು ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯಲ್ಲಿ ನಿರ್ಧರಿಸಲಾಯಿತು.
ಅಪರ ಜಿಲ್ಲಾಧಿಕಾರಿ ಅನುರಾಧ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕಾರ್ಯಸೂಚಿಯನ್ನು ಮಂಡಿಸಿದ ಸದಸ್ಯ ಕಾರ್ಯದರ್ಶಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿ ರಮೇಶ್ ವರ್ಣೇಕರ್ ಅವರು, ಒಟ್ಟು 13 ವಿಷಯಗಳನ್ನು ಸಭೆಯಲ್ಲಿ ಮಂಡಿಸಿದರು.
ಕುಕ್ಕೆಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ರಸ್ತೆ ಬದಿಯ ನಾಲ್ಕು ಶಾಲೆಗಳ ಬಳಿ ನಿಧಾನವಾಗಿ ಚಲಿಸಿ ಎನ್ನುವ ಸೂಚನಾ ಫಲಕ ಅಳವಡಿಸಲು ಕೋರಿ ಬಂದಿದ್ದ ಮನವಿಗೆ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಯಿತು. ಸಂತೆಕಟ್ಟೆ ಕೆಜಿ ರೋಡ್ ಮಧ್ಯೆ ಬಸ್ಸು ನಿಲುಗಡೆ ಕೋರಿ ಬಂದ ಮನವಿಯನ್ನು ರಸ್ತೆ ಕಾಮಗಾರಿ ಬಳಿಕ ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು.
ರಾಷ್ಟ್ರೀಯ ಹೆದ್ದಾರಿ 66 ರಲ್ಲಿನ ನಿಟ್ಟೂರು ಆಭರಣ ಮೋಟಾರ್ಸ್ ಶೋ ರೂಂ ಮುಂಭಾಗದ ಬಸ್ಸು ನಿಲುಗಡೆಯನ್ನು ಸ್ಥಳಾಂತರಿಸುವ ಬಗ್ಗೆ ಪೊಲೀಸ್ ಉಪ ನಿರೀಕ್ಷಕರು ಉಡುಪಿ ನಗರ ಪೊಲೀಸ್ ಠಾಣೆಯವರಿಂದ ಬಂದ ಮನವಿಗೆ ಸಭೆ ಸಮ್ಮತಿ ವ್ಯಕ್ತಪಡಿಸಿತು.
ಎಂಟಿಆರ್ ಹೋಟೇಲ್ ಬಳಿ ರಿಕ್ಷಾ ನಿಲ್ದಾಣ ಅನುಮತಿ ಕೋರಿದ ಚರ್ಚೆ ನಡೆಸಿದ್ದು, ಅಲ್ಲಿ ಸಾಕಷ್ಟು ಜಾಗ ಇಲ್ಲದ ಕಾರಣ ರಿಕ್ಷಾ ನಿಲ್ದಾಣಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಚರ್ಚಿಸಲಾಯಿತು.
ಎಂಜಿಎಂ ಕಾಲೇಜು ಕ್ರೀಡಾಂಗಣದ ಹತ್ತಿರ ಶಾರದಾ ರೆಸಿಡೆನ್ಸಿಯಲ್ ಸ್ಕೂಲ್ ಹಾಸ್ಟೆಲ್ ಎದುರು ರಸ್ತೆಗೆ ಹಂಪ್ಸ್‍ನ್ನು ನಿರ್ಮಿಸಲು ಸಭೆಯಲ್ಲಿ ಸೂಚಿಸಲಾಯಿತು ಹಾಗೂ ನಗರ ಸಭಾ ವ್ಯಾಪ್ತಿಯ ಕಸ್ತೂರ್ ಬಾ ನಗರ ವ್ಯಾಪ್ತಿಗೆ ಸೇರಿದೆ ಡಯಾನಾ ಟಾಕೀಸ್ ಹತ್ತಿರ ಅಟೊ ನಿಲ್ದಾಣವನ್ನು ರಚನೆ ಮಾಡಿಕೊಳ್ಳಲು ಅನುಮತಿ ಕೋರಿದ್ದು, ರಸ್ತೆ ಕಾಮಗಾರಿ ಪೂರ್ಣಗೊಂಡ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದರು.
ಉಡುಪಿ ನಗರ ಸಭಾ ವ್ಯಾಪ್ತಿಯ ಪರ್ಕಳ ರಿಕ್ಷಾ ನಿಲ್ದಾಣದ ಬಳಿ ಹೆಚ್ಚುವರಿ ನಿಲ್ದಾಣಕ್ಕೆ ಅನುಮತಿ ನೀಡಬೇಕಾಗಿ ಮನವಿ ಸಲ್ಲಿಸಿದ್ದು, ಅಲ್ಲಿ ಜಾಗವಿಲ್ಲದ ಕಾರಣ ಹೆಚ್ಚುವರಿ ನಿಲ್ದಾಣ ಅಸಾಧ್ಯವಾಗುತ್ತದೆ. ಅಂಬಾಗಿಲು ಮೀನು ಮಾರ್ಕೆಟ್ ಬಳಿ ಆಟೋ ನಿಲ್ದಾಣ ಅನುಮತಿ ಹಾಗೂ ಅಂಬಾಗಿಲು ಮೀನು ಮಾರ್ಕೆಟ್ ಹತ್ತಿರ ಆಟೋ ನಿಲ್ದಾಣವನ್ನು ತೆರವುಗೊಳಿಸಲು ಬಂದ ಮನವಿಯನ್ನು ಪರಿಶೀಲಿಸಲಾಯಿತು.
ನಿಟ್ಟೆ ಗ್ರಾಮದ ಪರಪ್ಪಾಡಿ ಜಂಕ್ಷನ್ ಬಳಿ ರಾಜ್ಯ ಹೆದ್ದಾರಿಯಲ್ಲೇ ವೇಗ ತಡೆಯನ್ನು ಅಳವಡಿಸುವ ಕುರಿತು ಚರ್ಚೆ ನಡೆಸಲಾಯಿತು.
ತ್ರಾಸಿ ಬಳಿಯ ಮೋವಾಡಿ ಕ್ರಾಸ್ ಜಂಕ್ಷನ್‍ನಲ್ಲಿ ಖಾಸಗಿ ಬಸ್ಸುಗಳ ನಿಲುಗಡೆ ಸೌಲಭ್ಯ ಕಲ್ಪಿಸುವ ಕುರಿತು ಮನವಿ ಬಗ್ಗೆ ಚರ್ಚಿಸಲಾಯಿತು. ಉಡುಪಿ ರೈಲ್ವೇ ನಿಲ್ದಾಣದಲ್ಲಿ ಟೂರಿಸ್ಟ್ ಟ್ಯಾಕ್ಸಿ ಪ್ರೀಪೈಡ್ ಕೌಂಟರ್‍ನ್ನು ಪ್ರಾರಂಭಿಸುವ ಬಗ್ಗೆ ಬಂದ ಮನವಿಗೆ ಅನುಮತಿಯನ್ನು ನೀಡಲಾಗಿದೆ ಎಂದರು.