KARNATAKA
ಯಾರೂ ಕೂಡ ರಾಜಕೀಯದಲ್ಲಿ ಯಾರ ಹೆಸರು ಬಳಸಿಕೊಳ್ಳದೇ ಗೆದ್ದಿಲ್ಲ: ಉಮಾಶ್ರೀ

ಬೆಂಗಳೂರು, ಅಕ್ಟೋಬರ್ 13: ಯಾರೂ ಕೂಡ ರಾಜಕೀಯದಲ್ಲಿ ಯಾರ ಹೆಸರು ಬಳಸಿಕೊಳ್ಳದೇ ಗೆದ್ದಿಲ್ಲ. ಕುಸುಮಾ ಅವರು ಡಿ ಕೆ ರವಿಯವರನ್ನು ಅಧಿಕೃತವಾಗಿ ಸಪ್ತಪದಿ ತುಳಿದು ಮದುವೆಯಾಗಿದ್ದಾರೆ. ಅವರ ಗಂಡನ ಹೆಸರು ಬಳಕೆ ಮಾಡಿಕೊಳ್ಳಬಾರದು ಎಂದು ಹೇಳಲು ಶೋಭಾ ಕರಂದ್ಲಾಜೆ ಯಾರು.
ಇಷ್ಟಕ್ಕೂ ಶೋಭಾ ಕರಂದ್ಲಾಜೆಗೆ ಗಂಡನನ್ನು ಕಳೆದುಕೊಂಡ ಹೆಣ್ಣಿನ ನೋವಿನ ಅರಿವಿಲ್ಲ ಎಂದು ಮಾಜಿ ಸಚಿವೆ ಉಮಾಶ್ರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಿವಂಗತ ಡಿ ಕೆ ರವಿ ಅವರ ಹೆಸರನ್ನು ಬಳಸಿಕೊಂಡು ಚುನಾವಣೆಗೆ ಸ್ಪರ್ಧಿಸುವ ಆರ್ ಆರ್ ನಗರ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಅವರಿಗೆ ಒಳ್ಳೆಯದಾಗುವುದಿಲ್ಲ ಎಂದು ಮೂದಲಿಸಿರುವ ಬಿಜೆಪಿ ಸಂಸದೆ ಶೋಭಾಕರಂದ್ಲಾಜೆ ಅವರನ್ನು ಕಾಂಗ್ರೆಸ್ ರಾಜ್ಯ ನಾಯಕಿಯರು ಒಕ್ಕೊರಳಿನಿಂದ ಖಂಡಿಸಿದ್ದಾರೆ.

ಶೋಭಾ ಕರಂದ್ಲಾಜೆ ಹೆಣ್ಣು ಮಕ್ಕಳ ನೋವಿಗೆ ಸ್ಪಂದಿಸುವ ಕೆಲಸ ಮಾಡಿಲ್ಲ. ಅಭಿವೃದ್ಧಿ ಮಾಡಲಾಗದೆ ಜನರನ್ನು ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟು ರಾಜಕೀಯ ಮಾಡಿಕೊಂಡು ಬರುತ್ತಿದ್ದಾರೆ. ರಾಜಕೀಯವಾಗಿ ಯಾವ ಹೆಣ್ಣು ಚುನಾವಣೆಗೆ ನಿಲ್ಲಬಾರದೆಂಬ ಯಾವುದೇ ಕಟ್ಟುಪಾಡುಗಳು ಇಲ್ಲ.
ಗಂಡ ಬಿಟ್ಟವರು, ವಿಧವೆಯಾದವರು ಚುನಾವಣೆಗೆ ನಿಲ್ಲಬಾರದು ಎಂದು ಸಂವಿಧಾನದಲ್ಲಿ ಎಲ್ಲಿಯೂ ಹೇಳಿಲ್ಲ ಎಂದರು. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ರಾಜ್ಯದಲ್ಲಿ ಹೆಣ್ಣೂ ಮಗಳ ಬರ್ಬರ ಅತ್ಯಾಚಾರ , ಕೊಲೆ ನಡೆದಾಗಲೂ ಶೋಭಾಕರಂದ್ಲಾಜೆ ಬಾಯಿಗೆ ಬೀಗ ಹಾಕಿ ಕುಳಿತುಕೊಂಡದ್ದು ಏಕೆ ಎಂದು ಕಾಂಗ್ರೆಸ್ ನಾಯಕಿಯರು ವಾಗ್ದಾಳಿ ನಡೆಸಿದ್ದಾರೆ.