DAKSHINA KANNADA
ಆನ್ ಲೈನ್ ಕ್ಲಾಸ್ ಗೆ ನೆಟ್ವರ್ಕ್ ಸಮಸ್ಯೆ, ಈ ವಿದ್ಯಾರ್ಥಿಗಳಿಗೆ ಬಸ್ ನಿಲ್ದಾಣವೇ ತರಗತಿ…..

ಪುತ್ತೂರು: ದಕ್ಷಿಣಕನ್ನಡ ವಿದ್ಯಾವಂತರ, ಅಭಿವೃದ್ಧಿ ಹೊಂದಿರುವ ಜಿಲ್ಲೆ ಎನ್ನುವ ಮಾತಿದೆ. ಆದರೆ ಇಲ್ಲಿನ ವಿದ್ಯಾವಂತರಾಗಲು ಪಡುವ ಪಾಡೇನು ಎನ್ನುವುದು ಇದೀಗ ಜಗಜ್ಜಾಹೀರಾಗುತ್ತಿದೆ. ಕೊರೊನಾ ಹಿನ್ನಲೆಯಲ್ಲಿ ಶಾಲಾ- ಕಾಲೇಜುಗಳು ಬಂದ್ ಆಗಿರುವ ಹಿನ್ನಲೆಯಲ್ಲಿ ಈ ಭಾಗದ ವಿದ್ಯಾರ್ಥಿಗಳು ಕಲಿಕೆಗಾಗಿ ಪಡುತ್ತಿರುವ ಪಾಡು ದೇವರಿಗೇ ಪ್ರೀತಿ. ಹೌದು ಬೆಟ್ಟ-ಗುಡ್ಡ, ಬಯಲು ಸೀಮೆ- ದಟ್ಟ ಕಾಡು ಹೀಗೆ ಪ್ರಕೃತಿಯ ಎಲ್ಲಾ ರೂಪಗಳನ್ನು ಮೈಗೂಡಿಸಿಕೊಂಡಿರುವ ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗೆ ಮೊಬೈಲ್ ನೆಟ್ವರ್ಕ್ ನದ್ದೇ ಪ್ರಾಬ್ಲಮ್.
ಮಂಗಳೂರು ಸೇರಿದಂತೆ ಪಟ್ಟಣಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈಗಾಗಲೇ ಆನ್ ಲೈನ್ ಕ್ಲಾಸ್ ಆರಂಭಗೊಂಡಿದ್ದು, ಈ ಕ್ಲಾಸ್ ಗಳನ್ನು ಎಟೆಂಡ್ ಮಾಡೋದೇ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ತಲೆನೋವಾಗಿದೆ. ಕುಗ್ರಾಮಗಳಲ್ಲಿ ಇರುವಂತಹ ಈ ವಿದ್ಯಾರ್ಥಿಗಳು ಮೊಬೈಲ್ ನೆಟ್ವರ್ಕ್ ಹುಡುಕಿಕೊಂಡು ಮನೆ ಬಿಟ್ಟು ಬೀದಿ ಸುತ್ತಾಡಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ.

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಗ್ರಾಮದ ಪಾಲೆತ್ತಡಿ ಎಂಬಲ್ಲಿನ ವಿದ್ಯಾರ್ಥಿಗಳಿಗೆ ಬಸ್ ನಿಲ್ದಾಣವೇ ತರಗತಿಯಾಗಿದೆ. ಬೆಳಿಗ್ಗೆ ಎದ್ದು ಆನ್ ಲೈನ್ ಕ್ಲಾಸ್ ಗೆ ಹಾಜರಾಗಲು ಇಲ್ಲಿನ ಹತ್ತಾರು ವಿದ್ಯಾರ್ಥಿಗಳು ಈ ಬಸ್ ನಿಲ್ದಾಣದ ಬಳಿ ಬರುತ್ತಾರೆ. ಬೆಳಿಗ್ಗಿನಿಂದ ಮಧ್ಯಾಹ್ನದವರೆಗೆ ತರಗತಿ ಇರುವ ಕಾರಣ ಕುಳಿತುಕೊಳ್ಳಲು ಕುರ್ಚಿಗಳನ್ನೂ ಕೊತ್ತುಕೊಂಡು ಬರುತ್ತಾರೆ.
ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಹೆಚ್ಚಾಗಿ ಇಲ್ಲದ ಕಾರಣ ಈ ವಿದ್ಯಾರ್ಥಿಗಳ ಕ್ಲಾಸ್ ಗಳಿಗೆ ಯಾವುದೇ ಅಡಚಣೆಯಾಗುತ್ತಿಲ್ಲ. ಮೊಬೈಲ್ ನೆಟ್ವರ್ಕ್ ಗಾಗಿ ಮನೆಯಿಂದ ಒಂದು,ಎರಡು ಕಿಲೋಮೀಟರ್ ಕಾಡಿನ ಹಾದಿಯಲ್ಲಿ ಬರುವ ಈ ವಿದ್ಯಾರ್ಥಿಗಳು ಮಧ್ಯಾಹ್ನದ ತನಕ ಬಸ್ ನಿಲ್ದಾಣದಲ್ಲೇ ನಿಂತು ಬಳಿಕ ತರಗತಿ ಮುಗಿದ ಬಳಿಕ ಮನೆಗೆ ಮರಳುತ್ತಾರೆ. ಸರಕಾರಿ ಸಾಮ್ಯದ ಬಿಎಸ್ಎನ್ಎಲ್ಲ ಸೇರಿದಂತೆ ಈ ಭಾಗದಲ್ಲಿ ಯಾವ ನೆಟ್ವರ್ಕ್ ಗಳೂ ವರ್ಕ್ ಆಗದ ಕಾರಣ ವಿದ್ಯಾರ್ಥಿಗಳು ಆನ್ಲೈನ್ ಕ್ಲಾಸ್ ಗಳಿಗಾಗಿ ಈ ಪಾಡು ಪಡುವಂತಾಗಿದೆ. ಜಿಲ್ಲೆಯ ಎಲ್ಲಾ ಊರಿನ ಸಮಸ್ಯೆಗಳೂ ಇದೊಂದೇ ಆಗಿರುವುದರಿಂದ ಎಲ್ಲರೂ ಈ ವಿಚಾರಕ್ಕೆ ಸಂಬಂಧಿಸಿದಂತೆ ಅಜೆಸ್ಟ್ ಆಗಿಕೊಂಡಿದ್ದಾರೆ.