DAKSHINA KANNADA
ಅನುದಾನವೇ ಬಂದಿಲ್ಲ- ಕೆಡಿಪಿ ಸಭೆ ಬಹಿಷ್ಕರಿಸಿ ಹೊರನಡೆದ ಬಿಜೆಪಿ ಶಾಸಕರು
ಮಂಗಳೂರು: ದ.ಕ.ಜಿಲ್ಲೆಗೆ ರಾಜ್ಯ ಸರಕಾರದಿಂದ ಅನುದಾನವೇ ಬಂದಿಲ್ಲವೆಂಬ ಗದ್ದಲ ತಾರಕಕ್ಕೇರಿ ಬಿಜೆಪಿ ಶಾಸಕರುಗಳು ದ.ಕ.ಜಿಪಂನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆಯುತ್ತಿದ್ದ ತ್ರೈಮಾಸಿಕ ಕೆಡಿಪಿ ಸಭೆಯನ್ನೇ ಬಹಿಷ್ಕರಿಸಿ ಹೊರನಡೆದ ಪ್ರಸಂಗ ನಡೆದಿದೆ.
ಮೊದಲಿಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮಾತನಾಡಿ, ರಸ್ತೆ ಗುಂಡಿ ಮುಚ್ಚಲೂ ಅನುದಾನ ಬರುತ್ತಿಲ್ಲ. 2ವರ್ಷಗಳಲ್ಲಿ ಯಾವುದೇ ಯೋಜನೆ ದ.ಕ.ಜಿಲ್ಲೆಗೆ ರಾಜ್ಯ ಸರಕಾರದಿಂದ ಬಂದಿಲ್ಲ. ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಒಂದು ರೂಪಾಯಿ ಅನುದಾನ ಕೊಟ್ಟಿಲ್ಲ. ಕರಾವಳಿಗೇಕೆ ಮಲತಾಯಿ ಧೋರಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ದನಿಗೂಡಿಸಿದ ಶಾಸಕ ಡಾ.ವೈ.ಭರತ್ ಶೆಟ್ಟಿಯವರು ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಹಾಕಲು ಅನುದಾನ ಬಂದಿಲ್ಲ ಎಂದರು. ಬಳಿಕ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ವಿವಿಧ ಸಮುದಾಯಗಳ ನಿಗಮಗಳು ಘೋಷಣೆಯಾದರೂ ಹಣ ಕೊಟ್ಟಿಲ್ಲ ಎಂದು ಒಬ್ಬರಾದೊಬ್ಬರು ಬಿಜೆಪಿ ಶಾಸಕರು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್‌ರಲ್ಲಿ ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಸಚಿವ ದಿನೇಶ್ ಗುಂಡೂರಾವ್ ಉತ್ತರಿಸಲು ಹೋದರೂ, ಶಾಸಕರುಗಳು ಸ್ವರ ಎತ್ತರಿಸಿ ಮಾತನಾಡುತ್ತಿದ್ದರು. ಇದಕ್ಕೆ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ‘ತಾವು ಸಚಿವರು ಉತ್ತರ ಕೊಡುವಾಗ ಪ್ರತಿಕ್ರಿಯಿಸಲು ಬಿಡಿ’ ಎಂದು ಸ್ವರವೆತ್ತಿದರು. ಈ ವೇಳೆ ಸಭೆಯಲ್ಲಿದ್ದ ಎಲ್ಲಾ ಬಿಜೆಪಿ ಶಾಸಕರುಗಳು ಐವನ್ ಡಿಸೋಜ ವಿರುದ್ಧ ಹರಿಹಾಯಲು ಆರಂಭಿಸಿದ್ದಾರೆ. ಬಳಿಕ ಅನುದಾನ ಬರುತ್ತಿಲ್ಲವೆಂದು ಎಂದು ಆರೋಪಿಸಿ ಸಂಸದ ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಹರೀಶ್ ಪೂಂಜಾ, ರಾಜೇಶ್ ನಾಯ್ಕ್ ಸಭೆ ಬಹಿಷ್ಕರಿಸಿ ಹೊರನಡೆದರು. ಬಳಿಕ ಎಂಎಲ್‌ಸಿ ಕಿಶೋರ್ ಕುಮಾರ್ ಬೊಟ್ಯಾಡಿ ಈ ಬಗ್ಗೆ ಆಕ್ಷೇಪವೆತ್ತಿದಾಗ, ‘ಈ ಬಗ್ಗೆ ತಾವು ಯಾರು ಕೇಳಲಿಕ್ಕೆ’ ಎಂದು ಐವನ್ ಆಕ್ಷೇಪ ವ್ಯಕ್ತಪಡಿಸಿದರು. ಆಗ ಕಿಶೋರ್ ಕುಮಾರ್ ಬೊಟ್ಯಾಡಿಯವರು ಐವನ್ ಡಿಸೋಜರಿಗೆ ‘ನಿಮಗೆ ಬಕೆಟ್ ಹಿಡಿಯಲು ಗೊತ್ತು’ ಎಂದು ಹೇಳಿ ಸಭೆಯಿಂದ ಹೊರನಡೆದರು.
ಬಳಿಕ ಪ್ರತಿಕ್ರಿಯಿಸಿದ ಸಚಿವ ದಿನೇಶ್ ಗುಂಡೂರಾವ್, ಏನೇ ಸಮಸ್ಯೆಗಳಿದ್ದರೂ ಚರ್ಚಿಸಿ ಸರಕಾರದ ಮಟ್ಟಕ್ಕೆ ಮುಟ್ಟಿಸಬಹುದು. ಸಿಎಂ ಈಗಾಗಲೇ ಇಡೀ ರಾಜ್ಯಕ್ಕೆ ಆರು ಸಾವಿರ ಕೋಟಿವರೆಗೆ ಯಾವುದೇ ತಾರತಮ್ಯವಿಲ್ಲದೆ ನೀಡಲಾಗುತ್ತದೆ ಎಂದು ವಿಧಾನಸಭೆಯಲ್ಲಿಯೇ ತಿಳಿಸಿದ್ದಾರೆ. ಇದು ಶಾಸಕರಿಗೂ ಗೊತ್ತು. ಇದೀಗ ಈ ರೀತಿ ಮಾಡೋದು ಅರ್ಥವಿಲ್ಲ ಎಂದು ಹೇಳಿದರು. ಇಲ್ಲಿಗೆ ಕೆಡಿಪಿ ಸಭೆಯಲ್ಲಿ ನಡೆದ ಬಿಜೆಪಿ-ಕಾಂಗ್ರೆಸ್ ಜಟಾಪಟಿ ಅಂತ್ಯಗೊಂಡಿತು.