LATEST NEWS
ನಿಫಾ ವೈರಸ್ – ಕರಾವಳಿಯಲ್ಲಿ ಕಟ್ಟೆಚ್ಚರ – ಸಚಿವ ದಿನೇಶ್ ಗುಂಡೂರಾವ್
ಮಂಗಳೂರು ಸೆಪ್ಟೆಂಬರ್ 21: ಕೇರಳದಲ್ಲಿ ನಿಫಾ ವೈರಸ್ ಕಂಡು ಬಂದ ಹಿನ್ನಲೆಯಲ್ಲಿ ಗಡಿ ಜಿಲ್ಲೆ ದಕ್ಷಿಣಕನ್ನಡದಲ್ಲಿ ಅಕ್ಟೋಬರ್ 7 ರವರೆಗೂ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಬುಧವಾರ ಕೇರಳದ ಗಡಿ ಜಿಲ್ಲೆಗಳಾದ ದ.ಕ, ಕೊಡಗು, ಮೈಸೂರು, ಚಾಮರಾಜನಗರ ಜಿಲ್ಲಾಧಿಕಾರಿಗಳು, ಜಿಲ್ಲಾ ಆರೋಗ್ಯಾಧಿಕಾರಿಗಳು, ಸರ್ವೇಕ್ಷಣಾ ಅಧಿಕಾರಿಗಳು, ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳ ಸಭೆ ಬಳಿಕ ಸುದ್ದಿಗಾರಿಗೆ ಈ ಕುರಿತು ಮಾಹಿತಿ ನೀಡಿದರು.
ಕೇರಳದಲ್ಲಿ 6 ನಿಪಾ ಪ್ರಕರಣಗಳು ವರದಿಯಾಗಿದ್ದು, ಅವರಲ್ಲಿ ಇಬ್ಬರು ಮೃತಪಟ್ಟು, ನಾಲ್ವರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಕೊನೆಯದಾಗಿ ಅಲ್ಲಿ ಸೆಪ್ಟೆಂಬರ್ 15 ರಂದು ನಿಫಾ ವೈರಸ್ ಕಂಡುಬಂದಿದೆ. ಅದಾಗಿ ಮೂರು ವಾರಗಳ ನಂತರ ಎಲ್ಲೂ ಸೋಂಕು ಕಂಡುಬಾರದೆ ಇದ್ದರೆ ಸೋಂಕು ಮುಕ್ತವಾಗಿದೆ ಎಂದು ತೀರ್ಮಾನಿಸಬಹುದು. ಆದ್ದರಿಂದ ರಾಜ್ಯದಲ್ಲಿ ಅಕ್ಟೊಬರ್ 7 ರವರೆಗೆ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ ಎಂದು ಗುಂಡೂರಾವ್ ಹೇಳಿದರು.
ಕೇರಳಕ್ಕೆ ಹೊಂದಿಕೊಂಡಿರುವ ಜಿಲ್ಲೆಗಳಲ್ಲಿ ಚೆಕ್ ಪೋಸ್ಟ್‌ಗಳನ್ನು ತೆರೆಯಲಾಗಿದ್ದು, ಎಂದು ದಿನೇಶ್ ಗುಂಡೂರಾವ್ ತಿಳಿಸಿದರು. ಕೇರಳದಿಂದ ಬರುವ ಪ್ರಯಾಣಿಕರ ಸ್ಕ್ರೀನಿಂಗ್ ನಡೆಸಲಾಗುತ್ತಿದೆ. ದ.ಕ.ದಲ್ಲಿ 12 ಚೆಕ್ ಪೋಸ್ಟ್‌ಗಳನ್ನು ಹಾಕಲಾಗಿದ್ದರೆ, ಮೈಸೂರಿನಲ್ಲಿ 4, ಕೊಡಗಿನಲ್ಲಿ 4, ಚಾಮರಾಜನಗರದಲ್ಲಿ 2 ಚೆಕ್ ಪೋಸ್ಟ್‌ಗಳಿವೆ. ಪ್ರತಿಯೊಂದು ಚೆಕ್ ಪೋಸ್ಟ್‌ನಲ್ಲೂ ವೈದ್ಯರು, ಆರೋಗ್ಯ ಸಿಬ್ಬಂದಿ ನಿಯೋಜಿಸಲಾಗಿದೆ.