LATEST NEWS
ಯೆಮೆನ್ – ನರ್ಸ್ ನಿಮಿಷಾ ಪ್ರಿಯಾ ಮರಣ ದಂಡನೆ ರದ್ದು ಕುರಿತಂತೆ ಅಧಿಕೃತ ಮಾಹಿತಿ ಇಲ್ಲ – ಕೇಂದ್ರ ಸರಕಾರ

ಯೆಮೆನ್ ಜುಲೈ 29: ಯೆಮೆನ್‌ನಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಕೇರಳದ ನರ್ಸ್ ನಿಮಿಷಾ ಪ್ರಿಯಾಗೆ ವಿಧಿಸಲಾಗಿದ್ದ ಮರಣದಂಡನೆಯನ್ನು ರದ್ದುಗೊಳಿಸಲಾಗಿದೆ ಎಂಬ ಮಾಧ್ಯಮಗಳ ವರದಿಯನ್ನು ಕೇಂದ್ರ ಸರಕಾರ ನಿರಾಕರಿಸಿದ್ದು, ಅದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಯೆಮೆನ್ ಸರಕಾರದಿಂದ ಬಂದಿಲ್ಲ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ನರ್ಸ್ ನಿಮಿಷಾ ಪ್ರಿಯಾಗೆ ವಿಧಿಸಲಾಗಿದ್ದ ಮರಣದಂಡನೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಈ ಹಿಂದೆ ಅಮಾನತುಗೊಂಡಿದ್ದ ಮರಣದಂಡನೆ ಶಿಕ್ಷೆಯನ್ನ ಸಂಪೂರ್ಣವಾಗಿ ರದ್ದು ಮಾಡಲಾಗಿದೆ ಎಂದು ಭಾರತದ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಅವರ ಕಚೇರಿ ಈ ಮಾಹಿತಿ ನೀಡಿದೆ.

ಗ್ರ್ಯಾಂಡ್ ಮುಫ್ತಿ ಕಚೇರಿ ಮಾಹಿತಿ ಪ್ರಕಾರ, ಯೆಮೆನ್ ರಾಜಧಾನಿ ಸನಾದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಶಿಕ್ಷೆ ರದ್ದುಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದ್ರೆ ಯೆಮನ್ ಸರ್ಕಾರದಿಂದ ಅಧಿಕೃತ ಲಿಖಿತ ಪ್ರಕಟಣೆ ಬಂದಿಲ್ಲ ಎಂದೂ ಸಹ ಸ್ಪಷ್ಟಪಡಿಸಲಾಗಿದೆ.
37 ವರ್ಷದ ನಿಮಿಷಾ ಪ್ರಿಯಾ ಮರಣದಂಡನೆ (Death Sentence) ಸಂಪೂರ್ಣ ರದ್ದಾದ ಬಗ್ಗೆ ಗ್ರ್ಯಾಂಡ್ ಮುಫ್ತಿ ಕಚೇರಿ ಹೇಳಿಕೆಯನ್ನ ಕೇಂದ್ರ ಸರ್ಕಾರ ನಿರಾಕರಿಸಿದೆ. ಶಿಕ್ಷೆ ಸಂಪೂರ್ಣ ರದ್ದಾಗಿರುವ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯಾಗಲಿ, ಲಿಖಿತ ಆದೇಶವಾಗಲಿ ಬಂದಿಲ್ಲ. ನಿಮಿಷಾ ಪ್ರಕರಣದ ಕುರಿತು ಕೆಲ ವ್ಯಕ್ತಿಗಳು ಹಂಚಿಕೊಳ್ಳುತ್ತಿರುವ ಮಾಹಿತಿ ತಪ್ಪಾಗಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ (MEA) ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.