LATEST NEWS
ಎನ್‍ಐಎ ಮೋಸ್ಟ್ ವಾಂಟೆಡ್ ಲಿಸ್ಟ್ ನಲ್ಲಿ ಕರಾವಳಿ ಜಿಲ್ಲೆಯವರು
ಎನ್‍ಐಎ ಮೋಸ್ಟ್ ವಾಂಟೆಡ್ ಲಿಸ್ಟ್ ನಲ್ಲಿ ಕರಾವಳಿ ಜಿಲ್ಲೆಯವರು
ಮಂಗಳೂರು ಅಕ್ಟೋಬರ್ 22: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಕರಾವಳಿಯ ಜಿಲ್ಲೆಯ ಯುವಕರ ಹೆಸರಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಜಯಪ್ರಕಾಶ್ ಪತ್ತೆಗೆ ಸಹಕರಿಸಿ ಎಂದು ಸಂಸ್ಥೆ ಮನವಿ ಮಾಡಿದೆ.
ಕಳೆದ ಏಳೆಂಟು ವರ್ಷಗಳಿಂದ ನಾಪತ್ತೆಯಾಗಿದ್ದ ಪುತ್ತೂರು ತಾಲೂಕಿನ ನೂಜಿಬಾಳ್ತಿಲ ನಿವಾಸಿ ಅಣ್ಣಾ ಎಂದೇ ಖ್ಯಾತನಾಗಿರೋ ಜಯಪ್ರಕಾಶ್ ಹೆಸರು ಎನ್ ಐಎ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿದೆ.
ಸನಾತನ ಸಂಸ್ಥೆಯಲ್ಲಿ ಗುರುತಿಸಿಕೊಂಡಿದ್ದ ಜಯಪ್ರಕಾಶ್ ಹೆಸರು ಅಜ್ಮೀರ್ ದರ್ಗಾ ಸ್ಫೋಟ, ಸಂಜೋತಾ ಎಕ್ಸ್ ಪ್ರೆಸ್ ಬಾಂಬ್ ಸ್ಫೋಟ, ಗೋವಾ ಮತ್ತು ಹೈದರಾಬಾದ್ ಮೆಕ್ಕಾಮಸೀದಿ ಸ್ಫೋಟದಲ್ಲಿ ಬಾಗಿಯಾಗಿದ್ದು ಆತನ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.
ಕೆಲ ವರ್ಷಗಳ ಹಿಂದೆ ನಾಪತ್ತೆಯಾಗಿರೋ ಅಣ್ಣಾ, ಮಾಲೆಂಗಾವ್ ಸ್ಪೋಟಕ್ಕೆ ಮುನ್ನ ಆಗಾಗ ಊರಿಗೆ ಬರುತ್ತಿದ್ದನು. ಆದ್ರೆ ತದನಂತರ ಆತ ಊರಿಗೆ ಬಂದಿಲ್ಲ ಎಂದು ಜಯಪ್ರಕಾಶ್ ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.
ಇದೀಗ ಭಾರತಕ್ಕೆ ಬೇಕಾಗಿರುವ ಮೋಸ್ಟ್ ವಾಂಟೆಡ್ ಕ್ರಿಮಿನಲ್‍ಗಳ ಪಟ್ಟಿಯಲ್ಲಿ ಜಯಪ್ರಕಾಶ್ ಹೆಸರನ್ನು ಸೇರಿಸಿ ಎನ್‍ಐಎ ಪಟ್ಟಿಯನ್ನು ಸಾರ್ವಜನಿಕರಿಗಾಗಿ ಬಿಡುಗಡೆ ಮಾಡಿದೆ. ಉಗ್ರ ಹಫೀಜ್ ಸಯೀದ್, ರಿಯಾಜ್ ಭಟ್ಕಳ್ ಸೇರಿ ನಕ್ಸಲರು, ಐಸಿಸ್ ಸೇರಿದವರು ಲಿಸ್ಟ್ ನಲ್ಲಿದ್ದಾರೆ. ನೂರಕ್ಕೂ ಮಿಕ್ಕವರ ಪಟ್ಟಿ ಮಾಡಿ ಪತ್ತೆಗಾಗಿ ಎನ್‍ಐಎ ಸಾರ್ವಜನಿಕರ ಮೊರೆ ಹೋಗಿದೆ. ಅಲ್ಲದೇ ಇವರುಗಳ ಸುಳಿವು ಸಿಕ್ಕಿದಲ್ಲಿ ಗುಪ್ತ ಮಾಹಿತಿ ನೀಡುವಂತೆ ಎನ್‍ಐಎ ಟ್ವೀಟ್ ಮಾಡಿ ಮನವಿ ಮಾಡಿಕೊಂಡಿದೆ.