FILM
ಇನ್ನು ಹೊಸ ತುಳು ಸಿನೆಮಾವನ್ನು ಮನೆಯಲ್ಲೇ ಕುಳಿತು ವೀಕ್ಷಿಸಿ.. ಸದ್ದು ಮಾಡಲಿದೆ ನಮ್ಮ ಕುಡ್ಲ ಟಾಕೀಸ್

ಮಂಗಳೂರು ಫೆಬ್ರವರಿ 16: ಅಂತರಾಷ್ಟ್ರೀಯ ಮಾರುಕಟ್ಟೆ ಇರುವ ಓಟಿಟಿ ಪ್ಲ್ಯಾಟ್ ಫಾರಂಗಳಿಗೆ ಪೈಪೋಟಿ ನೀಡಲು ಕರಾವಳಿಯಲ್ಲಿ ಹೊಸ ವೇದಿಕೆಯೊಂದು ಸದ್ದಿಲ್ಲದೆ ತಯಾರಾಗುತ್ತಿದ್ದು, ತುಳು ಸಿನೆಮಾಗಳನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮುನ್ನವೇ ಮನೆಯಲ್ಲೇ ಕುಳಿತು ಇಂಟರನೆಟ್ ಇಲ್ಲದೆ ಕೇಬಲ್ ಮೂಲಕ ನೋಡುವ ಹೊಸ ವೇದಿಕೆ ತಯಾರಾಗುತ್ತಿದೆ.
ಸೀಮಿತ ಮಾರುಕಟ್ಟೆ ಹೊಂದಿರುವ ತುಳು ಚಿತ್ರರಂಗಕ್ಕೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿರುವ ಥಿಯೇಟರ್‌ಗಳೇ ಮುಖ್ಯ ಆದರೆ ಸದ್ಯ ಕರಾವಳಿಯಲ್ಲಿರುವ ಸಿನೆಮಾ ಮಂದಿರಗಳು ಮಾಲ್ ಗಳಾಗಿ ಪರಿವರ್ತನೆ ಹೊಂದುತ್ತಿದ್ದು, ತುಳು ಚಿತ್ರೋದ್ಯಮಕ್ಕೆ ಭಾರಿ ಹೊಡೆತ ನೀಡಿದೆ.

ಈ ಹಿನ್ನಲೆ ತುಳುಚಿತ್ರರಂಗದ ಉಳುವಿಗಾಗಿ ಕರಾವಳಿಯ ಸ್ಥಳೀಯ ಚಾನೆಲ್ ನಮ್ಮ ಕುಡ್ಲ ತಂಡವು ತುಳು ಸಿನಿಮಾಗಳನ್ನು ಜನರಿಗೆ ತಲುಪಿಸಲು ಹೊಸ ವೇದಿಕೆಯಲ್ಲಿ ಸೃಷ್ಟಿಸಿದೆ. ಪ್ರಸ್ತುತ ಕೋಸ್ಟಲ್‌ವುಡ್ ಎದುರಿಸುತ್ತಿರುವ ಸಮಸ್ಯೆ, ಸವಾಲುಗಳನ್ನು ಅರಿತುಕೊಂಡು ಕರ್ಕೇರ ಸಹೋದರರ ‘ನಮ್ಮ ಕುಡ್ಲ’ ತಂಡವು ಹೊಸ ಭರವಸೆಯನ್ನು ಹುಟ್ಟಿಹಾಕಿದೆ. ಇದೀಗ ‘ನಮ್ಮ ಕುಡ್ಲ ಟಾಕೀಸ್’ ಎಂಬ ಹೊಸ ಪರಿಕಲ್ಪನೆಯನ್ನು ಮಾರ್ಚ್‌ನಲ್ಲಿ ಪರಿಚಯಿಸಲಿದೆ. ಚಿತ್ರಮಂದಿರದಲ್ಲಿ ಬಿಡುಗಡೆಯಾಗುವ ಮುಂಚೆಯೇ ತುಳು ಸಿನಿಮಾವನ್ನು ಮನೆಯಲ್ಲಿಯೇ ಕುಟುಂಬದೊಂದಿಗೆ ವೀಕ್ಷಿಸಲು ಅವಕಾಶ ಸಿಗಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮಾರ್ಚ್ ಮೊದಲ ಭಾನುವಾರವೇ ಹೊಸ ತುಳು ಸಿನಿಮಾವನ್ನು ಕಣ್ತುಂಬಿಕೊಳ್ಳಬಹುದಾಗಿದೆ.
ನಿರ್ಮಾಪಕರು ಬೇಡಿಕೆಯಿಟ್ಟ ಸೆನ್ಸಾರ್ ಆದ ಚಿತ್ರಗಳನ್ನು 8 ತಜ್ಞರ ತಂಡ ವೀಕ್ಷಣೆ ಮಾಡಿ, ಗುಣಮಟ್ಟವನ್ನು ಪರಿಶೀಲಿಸುತ್ತದೆ. ಆ ತಂಡವು ಗ್ರೀನ್ ಸಿಗ್ನಲ್ ನೀಡಿದ ಬಳಿಕ ಚಿತ್ರತಂಡದ ಜತೆ ಒಪ್ಪಂದ ಮಾಡಲಾಗುತ್ತದೆ. ಬಳಿಕ ಒಂದು ತಿಂಗಳ ಮಟ್ಟಿಗೆ ಅದರ ಪ್ರಸಾರದ ಹಕ್ಕನ್ನು ಪಡೆಯುತ್ತೇವೆ. ಅದಕ್ಕೆ ನಿರ್ದಿಷ್ಟ ಹಣವನ್ನು ಚಿತ್ರತಂಡಕ್ಕೆ ನೀಡುತ್ತೇವೆ. ಆ ಸಿನಿಮಾವನ್ನು ಪ್ರತಿ ಭಾನುವಾರ ಮಧ್ಯಾಹ್ನ, ಸಂಜೆ, ರಾತ್ರಿ ಮೂರು ಶೋನಲ್ಲಿ ‘ನಮ್ಮ ಕುಡ್ಲ ಟಾಕೀಸ್’ ವಾಹಿನಿಯಲ್ಲಿ ಪ್ರಸಾರ ಮಾಡುತ್ತೇವೆ. ಒಂದು ತಿಂಗಳಲ್ಲಿ ನಾಲ್ಕು ಭಾನುವಾರದಂತೆ ಒಟ್ಟು 12 ಶೋ ಪ್ರಸಾರವಾಗಲಿದೆ. ಗ್ರಾಹಕರು ಕೇಬಲ್ ಆಪರೇಟರ್ ಮೂಲಕ ₹ 120 ಪಾವತಿಸಿ, ಸಂಪರ್ಕ ಪಡೆಯಬಹುದು. ಎಚ್‌ಡಿ ಸಂಪರ್ಕಕ್ಕೆ ₹ 160 ನಿಗದಿ ಮಾಡಲಾಗಿದೆ. ಥಿಯೇಟರ್‌ನಲ್ಲಿರುವಂತೆ ಚಿತ್ರದ ಆರಂಭದಲ್ಲಿ, ಮಧ್ಯಂತರದಲ್ಲಿ ಮಾತ್ರ ಜಾಹೀರಾತು ಇರುತ್ತದೆ.