Connect with us

DAKSHINA KANNADA

ಕ್ರಿಕೆಟ್ ಟೂರ್ನ್ ಮೆಂಟ್ ಸತತ ಮೂರು ಬಾರಿ ಒಂದೇ ತಂಡ ಗೆದ್ದರೆ ಟೂರ್ನ್ ಮೆಂಟ್ ಬಂದ್- ವಿಚಿತ್ರ ನಿಯಮದ ಕ್ರಿಕೆಟ್ ಮ್ಯಾಚ್

ಪುತ್ತೂರು ಡಿಸೆಂಬರ್ 26: ಅಂತರಾಷ್ಟ್ರೀಯ ಕ್ರಿಕೆಟ್ ಗೆ ಒಂದು ರೀತಿಯ ನಿಯಮಗಳು ಇದ್ದರೆ, ಸ್ಥಳೀಯ ಗಲ್ಲಿ ಕ್ರಿಕೆಟ್ ಗಳು ತನ್ನದೇ ಆದ ಕೆಲವ ನಿಯಮಗಳನ್ನು ಹಾಕಿಕೊಳ್ಳುತ್ತವೆ. ಅಂತಹದೊಂದು ಕ್ರಿಕೆಟ್ ಟೂರ್ನ್ ಮೆಂಟ್ ಪುತ್ತೂರಿನಲ್ಲಿ ನಡೆಯುತ್ತಿದ್ದು., ಇಲ್ಲಿ ಮಾತ್ರ ಈ ಪಂದ್ಯಾಟದಲ್ಲಿ ಭಾಗವಹಿಸುವ ಯಾವುದಾದರೂ ತಂಡ ಮೂರು ವರ್ಷ ಸತತವಾಗಿ ಗೆದ್ದುಕೊಂಡು ಚಾಂಪಿಯನ್ ಆದಲ್ಲಿ ಈ ಪಂದ್ಯಾಟ ಅಂದಿಗೇ ನಿಂತುಹೋಗಲಿದೆ ಎಂಬ ವಿಚಿತ್ರ ರೀತಿಯ ರೂಲ್ಸ್ ಇದೆ.


ಹೌದು ಇಂತಹುದೊಂದು ವಿಚಿತ್ರ ನಿಯಮವನ್ನು ಹೇರಿಕೊಂಡು ನಡೆಸುವ ಕ್ರಿಕೆಟ್ ಪಂದ್ಯಾಟವಿದು. ಪುತ್ತೂರಿನ ಸಿಟಿ ಫ್ರೆಂಡ್ಸ್ ಆರ್ಟ್ ಅಂಡ್ ಸ್ಪೋರ್ಟ್ಸ್ ಕ್ಲಬ್ ಪುತ್ತೂರು, ಕ್ಲಾಸಿಕ್ ಫ್ರೆಂಡ್ಸ್ ಸೌದಿ ಅರೇಬಿಯಾ, ಯಂಗ್ ಗೈಸ್ಸ್ ಅಬುಧಾಬಿ ಮತ್ತು ಅಮರ್ ಅಕ್ಬರ್ ಅಂಟೋನಿ ಫ್ರೆಂಡ್ಸ್ ಬೆಂಗಳೂರು ಸಂಘಟನೆಗಳು ಸೇರಿಕೊಂಡು ಈ ಪಂದ್ಯಾಟವನ್ನು ಪುತ್ತೂರಿನಲ್ಲಿ ಕಳೆದ ಹದಿನಾಲ್ಕು ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ.
ಸ್ಥಳೀಯ ಕ್ರಿಕೆಟ್ ಆಟಗಾರರನ್ನು ಉತ್ತೇಜಿಸಲು ಹಳ್ಳಿ ಹುಡುಗರ ಪೇಟೆ ಕಪ್ ಎನ್ನುವ ಟ್ಯಾಗ್ ಲೈನ್ ನಲ್ಲಿ ನೀಡಲಾಗುವ ಅಮರ್ ಅಕ್ಬರ್ ಅಂಟೋನಿ ರೋಲಿಂಗ್ ಕಪ್ ಕ್ರಿಕೆಟ್ ಪಂದ್ಯಾಟಕ್ಕೆ ಇಂದಿಗೆ‌ ಹದಿನಾಲ್ಕು ವರ್ಷಗಳ ಇತಿಹಾಸ. ಸಮಾಜದಲ್ಲಿ ಸೌಹಾರ್ದತೆಯನ್ನು‌ ನೆಲೆಸುವ ನಿಟ್ಟಿನಲ್ಲಿ ಎಲ್ಲಾ ಜಾತಿ,ಧರ್ಮಗಳನ್ನು ಮೀರಿ ಈ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಸುಮಾರು 5 ದಿನಗಳ ಕಾಲ ನಡೆಯುವ ಈ ಪಂದ್ಯಾಟದಲ್ಲಿ 80 ಕ್ಕೂ ಮಿಕ್ಕಿದ ತಂಡಗಳು ಭಾಗವಹಿಸುತ್ತದೆ. ಆದರೆ ಈ ಪಂದ್ಯಾಟದಲ್ಲಿ ಒಂದೇ ತಂಡ ಸತತ ಮೂರು ವರ್ಷಗಳ ಕಾಲ ಗೆದ್ದು ಪ್ರಶಸ್ತಿ ಪಡೆದುಕೊಂಡಲ್ಲಿ ಅಲ್ಲಿಗೇ ಈ ಅಮರ್ ಅಕ್ಬರ್ ಅಂಟೋನಿ ಪಂದ್ಯಾಟ ನಿಂತು‌ಹೋಗಲಿದೆ.


ಇಂತಹುದೊಂದು ನಿಯಮವನ್ನು ಹೇರಿಕೊಂಡು‌ ಈ‌‌ ಕ್ರಿಕೆಟ್ ಸಂಘಟಕರು ಈ ಪಂದ್ಯಾಟವನ್ನು ಆರಂಭಿಸಿದ್ದರು. ಕಳೆದ ಎರಡು ವರ್ಷದ ಪಂದ್ಯಾಟದಲ್ಲಿ‌ ಬಂಟ್ವಾಳದ ಯಂಗ್ ಫ್ರೆಂಡ್ಸ್ ವಾಮದಪದವು ಎನ್ನುವ ತಂಡ ಪ್ರಶಸ್ತಿಯನ್ನು ಗೆದ್ದಿತ್ತು. 2023 ರಲ್ಲಿ ಮತ್ತೆ ಇದೇ ತಂಡ ಫೈನಲ್ ತನಕ ಪ್ರವೇಶಿಸಿತ್ತು. ಆ ವರ್ಷಕ್ಕೆ ಪಂದ್ಯಾಟ ನಿಂತು‌ಹೋಗುತ್ತದೆ ಎನ್ನುವ ಆತಂಕದಲ್ಲಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೆ ಪಂದ್ಯಾಟ ನೋಡುವ ಅವಕಾಶ ಲಭಿಸಿದೆ. ಫೈನಲ್ ಪಂದ್ಯಾಟದಲ್ಲಿ ಯಂಗ್ ಫ್ರೆಂಡ್ಸ್ ವಾಮದಪದವು‌ ತಂಡವನ್ನು ಪುತ್ತೂರಿನ ಎನ್.ಎಫ್.ಸಿ ಕುಂಬ್ರ ಎನ್ನುವ ತಂಡ ಸೋಲಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು. ಈ ಕಾರಣಕ್ಕಾಗಿ ಅಮರ್ ಅಕ್ಬರ್ ಅಂಟೋನಿ ಪಂದ್ಯಾಟ ಈ ಬಾರಿಯೂ ಜೀವಂತವಾಗಿರುವಂತಾಗಿದೆ. ಇದರಿಂದಾಗಿ ಮುಂದಿನ ಎರಡು ವರ್ಷಗಳ ಕಾಲ ಈ ಪಂದ್ಯಾಟ ನಿರಾತಂಕವಾಗಿ ನಡೆಯಲಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *