LATEST NEWS
ಹೊಸ ರೌಡಿ ಗ್ಯಾಂಗ್ ಕಟ್ಟಲು ಹಣ ಸುಲಿಗೆಗೆ ಇಳಿದಿದ್ದ ನಾಲ್ವರು ಪೊಲೀಸ್ ವಶಕ್ಕೆ

ಮಂಗಳೂರು ಮಾ.23: ಹೊಸ ರೌಡಿ ಗ್ಯಾಂಗ್ ಕಟ್ಟಲು ಹಣಕ್ಕಾಗಿ ಸುಲಿಗೆಗೆ ಇಳಿದಿದ್ದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರು ಹಣಕ್ಕಾಗಿ ನಗರದ ಎರಡು ಕಡೆಗಳಲ್ಲಿ 2 ದ್ವಿಚಕ್ರ ವಾಹನಗಳ ಸಹಿತ ಸವಾರರನ್ನು ಸುಲಿಗೆಗೈದ ಪ್ರಕರಣದಲ್ಲಿ ಭಾಗಿಯಾಗಿದ್ದು, ವಿಚಾರಣೆ ಹಲವಾರು ಮಾಹಿತಿಗಳನ್ನು ಬಾಯಿಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಬಂಧಿತರನ್ನು ಮಂಗಳೂರು ನಗರದ ಕುಲಶೇಖರದ ದೀಕ್ಷಿತ್ ಪೂಜಾರಿ, ಸೋಮೇಶ್ವರದ ಚಂದ್ರಹಾಸ ಪೂಜಾರಿ , ಕೋಟೆಕಾರ್ ನ ಹೇಮಚಂದ್ರ, ಸುರತ್ಕಲ್ ಚೇಳಾರಿನ ಸಂತೋಷ್ ಪೂಜಾರಿ ಎಂದು ಗುರುತಿಸಲಾಗಿದೆಯ. ಇವರ ಮೇಲೆ ಬೇರೆ ಬೇರೆ ಠಾಣೆಗಳಲ್ಲಿ ರೌಡಿಶೀಟ್ ತೆರೆಯಲಾಗಿದೆ.

ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಶಶಿಕುಮಾರ್ ದರೋಡೆ, ಕಳ್ಳತನ, ಸುಲಿಗೆ ಮೂಲಕ ಮೊದಲು ಹಣ ಗಳಿಸುವುದು ಮತ್ತು ಬಳಿಕ ಕ್ರಿಮಿನಲ್ ಹಿನ್ನಲೆಯ ವ್ಯಕ್ತಿಗಳ ಕೊಲೆ ಮಾಡುವುದು ಹಾಗೂ ಮಂಗಳೂರಿನ ಕ್ರಿಮಿನಲ್ ಚಟುವಟಿಕೆಯ ಮೇಲೆ ನಿಯಂತ್ರಣ ಸಾಧಿಸುವುದು ಬಂಧಿತರ ಆರೋಪಿಗಳ ಯೋಜನೆಯಾಗಿತ್ತು.
ಇವರು ಮರಳು, ಗಾಂಜಾ ದಂಧೆಯಲ್ಲೂ ಭಾಗಿಯಾಗಿದ್ದರು. ಭೂಗತ ಪಾತಕಿ ರವಿ ಪೂಜಾರಿ ಹಾಗೂ ಕ್ರಿಮಿನಲ್‌ಗಳ ಜೊತೆ ನಿಕಟ ಸಂಪರ್ಕದಲ್ಲಿದ್ದ ಇವರು ತಮ್ಮದೇ ಆದ ರೌಡಿ ಗ್ಯಾಂಗ್ ಕಟ್ಟಲು ಸಿದ್ಧತೆ ನಡೆಸಿದ್ದರು.ಇವರು ಸುಲಿಗೆಗೈದ ಎರಡು ದ್ವಿಚಕ್ರ ವಾಹನ, ನಗದು, ಮೊಬೈಲ್ ಫೋನ್, ಮಾರಕಾಸ್ತ್ರವನ್ನು ವಶಕ್ಕೆ ಪಡೆಯಲಾಗಿದೆ ಎಂದರು.