LATEST NEWS
ಮಂಗಳೂರು – ನೂತನ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟಗೆ ಭರ್ಜರಿ ಸ್ವಾಗತ

ಮಂಗಳೂರು ಜೂನ್ 29: ನೂತನ ಸಂಸದರಾಗಿ ಆಯ್ಕೆಯಾಗಿ ದೆಹಲಿಯಲ್ಲಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮಂಗಳೂರಿಗೆ ಆಗಮಿಸಿದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಅಭಿಮಾನಿಗಳು ಬಿಜೆಪಿ ಕಾರ್ಯಕರ್ತರು ಭರ್ಜರಿ ಸ್ವಾಗತ ನೀಡಿದ್ದಾರೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಕ್ಯಾ.ಬ್ರಿಜೇಶ್ ಚೌಟ ಅವರನ್ನು ಶಾಲು ಹೊದೆಸಿ ಸ್ವಾಗತಿಸಿದರು. ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಆರತಿ ಬೆಳಗಿ ಸ್ವಾಗತಿಸಿದರು.

ವಿಮಾನ ನಿಲ್ದಾಣದಿಂದ ತೆರೆದ ವಾಹನದಲ್ಲಿ ಹೊರಟ ಸಂಸದರನ್ನು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಇರುವ ವಾಹನಗಳ ಸಾಲು ಹಿಂಬಾಲಿಸಿತು. ಕಾವೂರು ಬಿಜೆಪಿ ಕಚೇರಿ ಬಳಿ ಹಾಗೂ ಕೆಪಿಟಿ ವೃತ್ತದ ಸಮೀಪ ಸಂಸದರನ್ನು ಪಕ್ಷದ ಕಾರ್ಯಕರ್ತರು ವೈವಿಧ್ಯಮಯ ಹೂಮಾಲೆ ಹಾಕಿ, ಶಾಲು ಹಾಕಿ, ಆರತಿ ಬೆಳಗಿ ಮತ್ತೆ ಸ್ವಾಗತಿಸಿದರು. ಚುನಾವಣೆ ಸಂದರ್ಭ ಕ್ಯಾ.ಚೌಟ ಅವರಿಗೆಂದೇ ಸಿದ್ಧಪಡಿಸಲಾದ ಹಾಡುಗಳಿಗೆ ಕಾರ್ಯಕರ್ತರು ಹೆಜ್ಜೆ ಹಾಕುವುದು ಕಂಡುಬಂತು.
ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ವೇಳೆ ಕಾರ್ಯಕರ್ತರೊಬ್ಬರು ಕೈಯಲ್ಲೆ ಪಟಾಕಿ ಸಿಡಿಸಲು ಹೋಗಿ ಪಟಾಕಿ ಅವರ ಮೇಲೆ ಬಿದ್ದ ಘಟನೆಯೂ ನಡೆಯಿತು. ಮಂಗಳೂರಿನಲ್ಲಿ ಮಳೆ ಸ್ವಲ್ಪ ವಿರಾಮ ಇದ್ದುದರಿಂದ ಬಿಜೆಪಿ ವಿಜಯೋತ್ಸವಕ್ಕೆ ತೊಂದರೆ ಆಗಿಲ್ಲ. ಆದರೂ ಮಳೆಯಿಂದಾಗಿ ಜಿಲ್ಲೆಯಲ್ಲಿ ಎರಡು ದಿನಗಳಲ್ಲಿ 7 ಸಾವು ಸಂಭವಿಸಿದ್ದು, ಈ ವೇಳೆ ವಿಜಯೋತ್ಸವಕ್ಕೆ ಬೇಕಿತ್ತಾ ಅನ್ನೊದು ಪ್ರಶ್ನೆಯಾಗಿ ಉಳಿದಿದೆ.