LATEST NEWS
ದಕ್ಷಿಣಕನ್ನಡದಲ್ಲಿ ಹೊಸ ಅವಿಷ್ಕಾರ ನೀರಿನ ಮೇಲೆ ಡಾಮರು ರಸ್ತೆ ನಿರ್ಮಾಣ …!

ದಕ್ಷಿಣಕನ್ನಡದಲ್ಲಿ ಹೊಸ ಅವಿಷ್ಕಾರ ನೀರಿನ ಮೇಲೆ ಡಾಮರು ರಸ್ತೆ ನಿರ್ಮಾಣ …!
ಮಂಗಳೂರು ನವೆಂಬರ್ 1: ನೀರಿನ ಮೇಲೆ ಡಾಮರು ಹಾಕಿ ರಸ್ತೆ ನಿರ್ಮಾಣ ಮಾಡುವ ಹೊಸ ಅವಿಷ್ಕಾರವನ್ನು ಮಂಗಳೂರಿನಲ್ಲಿ ಕಂಡು ಹಿಡಿಯಲಾಗಿದ್ದು, ಇದಕ್ಕೆ ಪೆಟೆಂಟ್ ತೆಗೆದುಕೊಳ್ಳೊದೊಂದೆ ಬಾಕಿ ಇದ್ದು, ಈ ಅವಿಷ್ಕಾರ ಮಾಡಿದ ಇಂಜಿನಿಯರ್‌ಗೆ ಭಾರತ ರತ್ನ ಪ್ರಶಸ್ತಿ ನೀಡಲೇಬೇಕು ಎಂದು ಒತ್ತಾಯ ಕೂಡ ಮಾಡಲಾಗುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿರುವ ಈ ಪೋಟೋ ಗೆ ಈಗ ಟಾಪ್ ಟ್ರೆಂಡಿಂಗ್ ನಲ್ಲಿದೆ. ನೀರಿನ ಮೇಲೆ ಡಾಮರು ಹಾಕಿ ರಸ್ತೆ ದುರಸ್ಥಿ ಕಾರ್ಯವನ್ನು ಮಂಗಳೂರಿನಲ್ಲಿ ನಡೆಸಲಾಗುತ್ತಿದೆ.

ನವೆಂಬರ್ 2 ರಂದು ಉಪ ರಾಷ್ಟ್ರಪತಿಗಳು ನಗರಕ್ಕೆ ಆಗಮಿಸಿ ಎನ್ ಐಟಿಕೆ ಘಟಿಕೋತ್ಸವದಲ್ಲಿ ಭಾಗವಹಿಸಲಿದ್ದಾರೆ.ಈ ಹಿನ್ನಲೆಯಲ್ಲಿ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಸಿಂದೂ ಬಿ ರೂಪೇಶ್ ಅವರ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಉಪರಾಷ್ಟ್ರಪತಿಗಳು ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಕೂಳೂರಿನಿಂದ ಸುರತ್ಕಲ್ ಎನ್‍ಐಟಿಕೆವರೆಗೆ ರಸ್ತೆ ದುರಸ್ಥಿ ಕಾರ್ಯವನ್ನು ಜಿಲ್ಲೆಯ ಅಧಿಕಾರಿಗಳು ಕೈಗೆತ್ತಿಕೊಂಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 66 ಸಂಪೂರ್ಣ ಹೊಂಡ ಗುಂಡಿಗಳಿಂದ ಕೂಡಿದ್ದು, ಯಾವುದೇ ರೀತಿಯ ವಾಹನ ಚಲಿಸಲು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈಗ ಅದೇ ಮಾರ್ಗದಲ್ಲಿ ಉಪರಾಷ್ಟ್ರಪತಿಗಳು ಸಂಚರಿಸಬೇಕಾದ ಹಿನ್ನಲೆಯಲ್ಲಿ ಅಧಿಕಾರಿಗಳು ನಿದ್ರೆಯಿಂದ ಎದ್ದು ಮಳೆಯ ನಡುವೆ ರಸ್ತೆಗಳಿಗೆ ತೇಪೆ ಕಾರ್ಯ ನಡೆಸುತ್ತಿದ್ದಾರೆ. ಎರಡು ಚಂಡಮಾರುತಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದರೂ ಜಿಲ್ಲೆಯ ಅಧಿಕಾರಿಗಳು ಸಾರ್ವಜನಿಕರ ದುಡ್ಡನ್ನು ಪೊಲು ಮಾಡುತ್ತಿರುವ ದೃಶ್ಯ ಇದಾಗಿದೆ.