DAKSHINA KANNADA
ನೆಲ್ಯಾಡಿ – ಕಟ್ಟಿಗೆ ವಿಚಾರಕ್ಕೆ ದೊಡ್ಡಪ್ಪನ ಮಗನನ್ನೇ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ ಆರೋಪಿ ಅರೆಸ್ಟ್

ಪುತ್ತೂರು ಮೇ 12: ಕಟ್ಟಿಗೆ ಕೊಂಡೊಯ್ಯುವ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ದೊಡ್ಡಪ್ಪನ ಮಗನನ್ನೇ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬಂಧಿತ ಆರೋಪಿಯನ್ನು ಹರಿಪ್ರಸಾದ್ ಎಂದು ಗುರುತಿಸಲಾಗಿದೆ.
ಘಟನೆ ವಿವರ

ಕೊಲೆಯಾದ ಶರತ್ ಅವರ ಪೋಷಕರು, ಸಹೋದರ ಉಪ್ಪಿನಂಗಡಿಯಲ್ಲಿ ವಾಸ್ತವ್ಯವಿದ್ದು, ಮಾದೇರಿಯಲ್ಲಿ ಶರತ್ ಮಾತ್ರ ವಾಸವಿದ್ದರು. ಶರತ್, ಜನಾರ್ದನ ಅವರ ಮನೆ ಅಕ್ಕಪಕ್ಕದಲ್ಲೇ ಇದ್ದು, ಅವರ ಮಧ್ಯೆ ಕೆಲವು ದಿನಗಳಿಂದ ಕ್ಷುಲ್ಲಕ ಕಾರಣಕ್ಕೆ ಗಲಾಟೆಯಾಗುತ್ತಿತ್ತು.
ಮೇ 8ರಂದು ರಾತ್ರಿ ಶರತ್ ಅವರ ಜಾಗದಲ್ಲಿ ಹಾಕಿದ್ದ ಕಟ್ಟಿಗೆಯನ್ನು ಜನಾರ್ದನ ಅವರ ಮನೆಯವರು ಕೊಂಡು ಹೋಗುತ್ತಿದ್ದಾಗ ಶರತ್ ಆಕ್ಷೇಪಿಸಿದ್ದರು. ಈ ವೇಳೆ ಗಲಾಟೆ ನಡೆದಿದೆ. ಮೇ 9ರಂದು ರಾತ್ರಿ ಶರತ್ ಅವರು ಮಾದೇರಿಯಲ್ಲಿರುವ ಜನಾರ್ದನ ಅವರ ಮನೆ ಅಂಗಳದಲ್ಲಿ ನಿಂತು ಅವರ ಪುತ್ರ ಸತೀಶ ಅವರನ್ನು ನಿಂದಿಸುತ್ತಿದ್ದರು. ಈ ವೇಳೆ ಹರಿಪ್ರಸಾದ್ ಅವರು ಬಂದು ಮರದ ದೊಣ್ಣೆಯಿಂದ ಶರತ್ ಅವರ ತಲೆಗೆ ಹಲ್ಲೆ ನಡೆಸಿದ್ದರು. ಈ ವೇಳೆ ಕುಸಿದು ಬಿದ್ದ ಶರತ್ ಅವರ ತಲೆಗೆ ಮತ್ತೆ ಬಲವಾಗಿ ಹಲ್ಲೆ ನಡೆಸಿದ್ದರು. ಈ ಬಗ್ಗೆ ಶರತ್ ಅವರ ಸಹೋದರ ಚರಣ್ ಕುಮಾರ್ ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಆರೋಪಿ ಹರಿಪ್ರಸಾದ್ ನನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.