LATEST NEWS
ಮಂಗಳೂರು – ಗೂಗಲ್ ನಲ್ಲಿ ನೆಗೆಟಿವ್ ರಿವ್ಯೂ ಹಾಕಿದ್ದಕ್ಕೆ ಪಿಜಿ ಮಾಲೀಕನಿಂದ ಎಂಜಿನಿಯರಿಂಗ್ ವಿದ್ಯಾರ್ಥಿ ಮೇಲೆ ಹಲ್ಲೆ

ಮಂಗಳೂರು ಮಾರ್ಚ್ 20: ಗೂಗಲ್ ನಲ್ಲಿ ಪಿಜಿಗೆ ನೆಗೆಟಿವ್ ರೀವ್ಯೂ ಹಾಕಿದ್ದಕ್ಕೆ ಎಂಜಿನಿಯರಿಂಗ್ ವಿಧ್ಯಾರ್ಥಿ ಮೇಲೆ ಪಿಜಿ ಮಾಲೀಕ ಸೇರಿದಂತೆ ಐವರ ಗುಂಪು ಹಲ್ಲೆ ನಡೆಸಿದ ಘಟನೆ ಮಾರ್ಚ್ 17 ರಂದು ರಾತ್ರಿ 10.30ರ ಸುಮಾರಿಗೆ ಕದ್ರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹಲ್ಲೆಗೊಳಗಾದ ಯುವಕನನ್ನು ಕಲಬುರಗಿ ಮೂಲದ ವಿಕಾಸ್ ಎಂದು ಗುರುತಿಸಲಾಗಿದೆ. ವಿಕಾಸ್ ಕಳೆದ ಆರು ತಿಂಗಳಿನಿಂದ ಪಿಜಿಯಲ್ಲಿ ವಾಸಿಸುತ್ತಿದ್ದು, ನಂತರ ಬೇರೆ ಸ್ಥಳಕ್ಕೆ ಸ್ಥಳಾಂತರಗೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ವಿಕಾಸ್ ಸಲ್ಲಿಸಿದ ದೂರಿನ ಪ್ರಕಾರ, ಅವರು ಗೂಗಲ್‌ನಲ್ಲಿ ಪಿಜಿ ಬಗ್ಗೆ ನಕಾರಾತ್ಮಕ ವಿಮರ್ಶೆಯನ್ನು ಪೋಸ್ಟ್ ಮಾಡಿದ್ದರು. ಆಹಾರದಲ್ಲಿ ಕೀಟಗಳ ಉಪಸ್ಥಿತಿ, ಕಳಪೆ ನೈರ್ಮಲ್ಯ ಮತ್ತು ಅಶುಚಿಯಾದ ಶೌಚಾಲಯಗಳಂತಹ ಸಮಸ್ಯೆಗಳನ್ನು ಎತ್ತಿ ತೋರಿಸಿ ಪಿಜಿಗೆ ಸಿಂಗಲ್-ಸ್ಟಾರ್ ರೇಟಿಂಗ್ ನೀಡಿದ್ದರು.

ಇದರಿಂದ ಕೋಪಗೊಂಡ ಪಿಜಿ ಮಾಲೀಕ ಸಂತೋಷ್, ವಿಕಾಸ್‌ಗೆ ಬೆದರಿಕೆ ಹಾಕಿ ಗೂಗಲ್‌ನಲ್ಲಿ ಕಮೆಂಟ್ ಅನ್ನು ಅಳಿಸುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ವಿಕಾಸ್ ನಿರಾಕರಿಸಿದಾಗ, ಸಂತೋಷ್ ಇತರ ನಾಲ್ವರೊಂದಿಗೆ ಸೇರಿ ಆತನ ಮೇಲೆ ಹಲ್ಲೆ ನಡೆಸಿದ್ದಾರೆ ಮತ್ತು ವಿಮರ್ಶೆಯನ್ನು ತೆಗೆದುಹಾಕುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ. ಸಂತ್ರಸ್ತನ ದೂರಿನ ಮೇರೆಗೆ ಪಿಜಿ ಮಾಲೀಕರು ಮತ್ತು ಅವರ ಸಹಚರರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿದ್ಯಾರ್ಥಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು, ನಾವು ಪೊಲೀಸ್ ದೂರು ಕೊಟ್ಟಿದ್ದೇವೆ, ಆದರೆ ಕೈಯಲ್ಲಿ ಹಲ್ಲೆ ಮಾಡಿದ್ದಕ್ಕೆ ಕಂಪ್ಲೇಂಟ್ ರಿಜಿಸ್ಟರ್ ಮಾಡೋದಿಲ್ಲ ಎಂದಿದ್ದಾರೆ. ನಮಗೇನೂ ಗೊತ್ತಿರಲಿಲ್ಲ. ವಿದ್ಯಾರ್ಥಿ ಸಂಘಟನೆಯವರದ್ದೂ ಪರಿಚಯ ಇಲ್ಲ. ಅಲ್ಲಿ ಪಿಜಿ ಏನೂ ಚೆನ್ನಾಗಿಲ್ಲ. ನಾನೂ ಅಲ್ಲಿದ್ದೆ. ಹಾಗಾಗಿ ಕಮೆಂಟ್ ಹಾಕಿದ್ದೆ. ಅದಕ್ಕೆ ಬಂದು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಿದ್ದಾನೆ. ಅಲ್ಲಿನ ಪಿಜಿಯ ವ್ಯವಸ್ಥೆ ಎಷ್ಟು ಕ್ಲೀನ್ ಇದೆಯೆಂದು ವಿದ್ಯಾರ್ಥಿ ತನ್ನಲ್ಲಿದ್ದ ಫೋಟೋಗಳನ್ನು ಮಾಧ್ಯಮಕ್ಕೆ ನೀಡಿದ್ದು ವಾಸ್ತವ ಸ್ಥಿತಿ ತೋರಿಸುತ್ತಿದೆ.