DAKSHINA KANNADA
ನೀವು ನೋಡಲೇಬೇಕಾದ 12 ವರ್ಷಕ್ಕೊಮ್ಮೆ ಅರಳುವ ನೀಲಿಕುರುಂಜಿ ಹೂವು
ನೀವು ನೋಡಲೇಬೇಕಾದ 12 ವರ್ಷಕ್ಕೊಮ್ಮೆ ಅರಳುವ ನೀಲಿಕುರುಂಜಿ ಹೂವು
ಪುತ್ತೂರು ಅಕ್ಟೋಬರ್ 24: 12 ವರ್ಷಗಳಿಗೊಮ್ಮೆ ಪಶ್ಚಿಮಘಟ್ಟದ ಕೆಲವೇ ಭಾಗಗಳಲ್ಲಿ ಅರಳಿ ಕಂಗೊಳಿಸಿ, ಪ್ರವಾಸಿಗರ ಕಣ್ಮನ ಸೆಳೆಯುವ ಹೂವು ನೀಲಿಕುರುಂಜಿ. ಈ ಬಾರಿ ಕರ್ನಾಟಕದ ಪ್ರಮುಖ ಚಾರಣ ತಾಣಗಳಲ್ಲಿ ಒಂದಾದ ಕುಮಾರ ಪರ್ವತದಲ್ಲಿ ಮೈದಳೆದು ಚಾರಣಿಗರ ಕಣ್ಣಿಗೆ ಹಬ್ಬವಾಗಿದೆ.
2006ರಲ್ಲಿ ಚಿಕ್ಕಮಗಳೂರಿನ ಬಾಬಾಬುಡನ್‌ಗಿರಿ, ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ಭಾಗಗಳಲ್ಲಿ ನೀಲಿಕುರುಂಜಿ ಅರಳಿ ನಿಂತಿದ್ದು ಪ್ರವಾಸಿಗರ ಆಕರ್ಷಣೆಗೆ ಕಾರಣವಾಗಿತ್ತು. ಪಶ್ಚಿಮ ಘಟ್ಟಗಳಿಗಷ್ಟೇ ಸೀಮಿತವಾಗಿರುವ ಈ ಹೂವು ನಿರೀಕ್ಷೆಯಂತೆ 12 ವರ್ಷ ಬಳಿಕ ಎಂದರೆ ಈ ವರ್ಷ ಆಗಸ್ಟ್ ಸೆಪ್ಟೆಂಬರ್ ಸಮಯದಲ್ಲಿ ಮತ್ತೆ ಅರಳಬೇಕಿತ್ತು. ಆದರೆ ಚಿಕ್ಕಮಗಳೂರಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ಕಂಡು ಬಂದಿಲ್ಲ. ಬದಲಿಗೆ ಕುಮಾರ ಪರ್ವತದ ತುದಿಯಲ್ಲಿ ಅರಳಿ ನಿಂತಿದೆ.
ಕುಮಾರಪರ್ವತಕ್ಕೆ ಕೆಲ ದಿನಗಳ ಹಿಂದೆ ಚಾರಣ ಹೋಗಿದ್ದ ಮಂಗಳೂರಿನ ಕಾಲೇಜು ವಿದ್ಯಾರ್ಥಿ ಸುಕುಮಾರ್ ಕಮಿಲ ಹಾಗೂ ಅವರ ಮಿತ್ರರ ತಂಡ ಪರ್ವತ ಮೇಲೇರುವಾಗ ದಿಢೀರ್ ಆಗಿ ಗೋಚರಿಸಿದ ನೀಲಿ ಬಣ್ಣದ ಹೂವುಗಳಿಂದ ತಂಡಕ್ಕೆ ಅಚ್ಚರಿಯಾಗಿದೆ.
ಕುಮಾರಪರ್ವತದ ಗಿರಿಗದ್ದೆ ಭಾಗದಿಂದ ಮೇಲಕ್ಕೆ ತೆರಳುವಾಗ ಕಲ್ಲುಚಪ್ಪರ ಕಳೆದು ಮಾರಿಹಳ್ಳ ಎಂಬ ಕಣಿವೆಯ ಕಡೆಗೆ ದೊಡ್ಡ ಪ್ರಮಾಣದಲ್ಲಿ ಈ ಹೂಗಳು ಕಂಗೊಳಿಸುತ್ತಿವೆ, ಬಳಿಕ ಕುಮಾರ ಪರ್ವತ ಶಿಖರದ ದಾರಿಯುದ್ದಕ್ಕೂ ಇಕ್ಕೆಲಗಳಲ್ಲೂ ನೀಲಿಕುರುಂಜಿ ಕಣ್ಣಿಗೆ ಹಬ್ಬದಂತೆ ಗೋಚರಿಸುತ್ತದೆ.
ನೀಲಿಕುರುಂಜಿ ಹೂವಾಗಿ ಅರಳುವುದು ಅದರ ಜೀವಕಾಲದಲ್ಲಿ ಒಮ್ಮೆ ಮಾತ್ರ. ಅದು ಹೂವಾಗಿ ಒಣಗಿ ಬೀಜ ಉದುರಿ ಮತ್ತೆ ಗಿಡವಾಗಿ ಮತ್ತೆ ಹೂವಾಗುವುದಕ್ಕೆ ತೆಗೆದುಕೊಳ್ಳುವ ಅವಧಿ 12 ವರ್ಷ.ಒಮ್ಮೆ ಅರಳಿದರೆ ಸುಮಾರು 30ರಿಂದ 40 ದಿನಗಳ ಕಾಲ ಅರಳಿರುತ್ತದೆ.