FILM
ಅನ್ನಪೂರ್ಣಿ ವಿವಾದ – ಕ್ಷಮೆ ಕೇಳಿದ ಲೇಡಿ ಸೂಪರ್ ಸ್ಟಾರ್ ನಯನತಾರಾ
ಚೆನ್ನೈ ಜನವರಿ 19: ಅನ್ನಪೂರ್ಣಿ ಸಿನೆಮಾದಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ತಂದಿರುವ ಆರೋಪದ ಹಿನ್ನಲೆ ಓಟಿಟಿಯಿಂದ ಸಿನೆಮಾಗೆ ಗೇಟ್ ಪಾಸ್ ಕೊಡಲಾಗಿದ್ದು, ಇದರ ಬೆನ್ನಲ್ಲೇ ಇದೀಗ ಬಹುಭಾಷಾ ನಟಿ ಲೇಡಿ ಸೂಪರ್ ಸ್ಟಾರ್ ನಯನತಾರಾ ಅವರು ಹಿಂದೂಗಳ ಕ್ಷಮೆಯಾಚಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ‘ನಾನು ಸೇರಿದಂತೆ ‘ಅನ್ನಪೂರ್ಣಿ’ ಚಿತ್ರತಂಡದವರು ಇತರರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಯಾವುದೇ ಉದ್ದೇಶವನ್ನು ಹೊಂದಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.
‘ಸಕಾರಾತ್ಮಕ ಸಂದೇಶವನ್ನು ಹಂಚಿಕೊಳ್ಳುವ ನಮ್ಮ ಪ್ರಾಮಾಣಿಕ ಪ್ರಯತ್ನದಲ್ಲಿ ಅಜಾಗರೂಕತೆಯಿಂದಾಗಿ ನೋವನ್ನು ಉಂಟುಮಾಡಿರಬಹುದು. ಈ ಹಿಂದೆ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲಾದ, ಸೆನ್ಸಾರ್‌ಗೆ ಒಳಪಟ್ಟಿದ್ದ ಚಲನಚಿತ್ರವನ್ನು ಒಟಿಟಿ ವೇದಿಕೆಯಿಂದ ತೆಗೆದುಹಾಕುವುದನ್ನು ನಾವು ನಿರೀಕ್ಷಿಸಿರಲಿಲ್ಲ. ನಾನು ಸೇರಿದಂತೆ ಚಿತ್ರತಂಡದವರು ಇತರರ ಭಾವನೆಗಳನ್ನು ನೋಯಿಸುವ ಉದ್ದೇಶವನ್ನು ಹೊಂದಿರಲಿಲ್ಲ’ ಎಂದು ತಿಳಿಸಿದ್ದಾರೆ.
ನಾನು ದೇವರನ್ನು ಸಂಪೂರ್ಣವಾಗಿ ನಂಬುತ್ತೇನೆ ಮತ್ತು ದೇಶದಾದ್ಯಂತ ಹಲವು ದೇವಾಲಯಗಳಿಗೆ ಭೇಟಿ ನೀಡಿದ್ದೇನೆ. ಯಾರ ಭಾವನೆಗಳಿಗಾದರೂ ನೋವುಂಟು ಮಾಡಿದ್ದರೆ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ. ‘ಅನ್ನಪೂರ್ಣಿ’ ಚಿತ್ರದ ಉದ್ದೇಶ ಸುಧಾರಣೆ ಬಯಸುವುದಾಗಿತ್ತೇ ಹೊರತು, ದುಃಖವನ್ನು ಉಂಟುಮಾಡುವುದಲ್ಲ. ಕಳೆದ ಎರಡು ದಶಕಗಳಿಂದ ಚಿತ್ರೋದ್ಯಮದಲ್ಲಿ ನನ್ನ ಪ್ರಯಾಣ ಸಕಾರಾತ್ಮಕತೆಯನ್ನು ಹರಡುವುದರೊಂದಿಗೆ ಸಾಗಿದೆ ಎಂದು ಬರೆದುಕೊಂಡಿದ್ದಾರೆ.