LATEST NEWS
ನಾಳೆಯಿಂದಲೇ ಹೆಚ್ಚುವರಿ ಟೋಲ್ – ನವಯುಗದಿಂದ ಪೇಪರ್ ನಲ್ಲಿ ಜಾಹಿರಾತು…!!

ಉಡುಪಿ ಡಿಸೆಂಬರ್ 03: ಸುರತ್ಕಲ್ ಟೋಲ್ ಗೇಟ್ ಬಂದ್ ಆಗುತ್ತಿದ್ದಂತೆ ಇದೀಗ ಹೆಜಮಾಡಿ ಟೋಲ್ ಗೇಟ್ ನಲ್ಲಿ ಹೆಚ್ಚುವರಿ ಸುಂಕ ವಸೂಲಿಗೆ ತಯಾರಿ ನಡೆಯುತ್ತಿದ್ದು, ಡಿಸೆಂಬರ್ 4ರಿಂದಲೇ ಡಬಲ್ ವಸೂಲಿ ಪ್ರಾರಂಭವಾಗಲಿದೆ ಎಂದು ನವಯುಗ ಟೋಲ್ ಪ್ಲಾಜಾದವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ಸುರತ್ಕಲ್ ಟೋಲ್ ಗೇಟ್ ಬಂದ್ ಆದ ಬಳಿಕ ಅದರ ಟೋಲ್ ಸುಂಕವನ್ನು ಹೆಜಮಾಡಿಗೆ ವರ್ಗಾಯಿಸಲಾಗಿತ್ತು, ಆದರೆ ಇದೀಗ ಹೆಜಮಾಡಿಯಲ್ಲಿ ಡಬಲ್ ವಸೂಲಿಯಿಂದ ಉಡುಪಿ ಜಿಲ್ಲೆಯ ಜನರಿಗೆ ಹೊರೆಯಾಗುತ್ತದೆ ಎಂದು ಕರಾವಳಿಯಲ್ಲಿ ಭಾರೀ ಜನ ವಿರೋಧ ಕೇಳಿಬಂದಿದೆ. ಉಡುಪಿ ಶಾಸಕ ರಘುಪತಿ ಭಟ್ ದೆಹಲಿಯಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ, ಈ ರೀತಿಯ ಜನ ವಿರೋಧಿ ನೀತಿಯನ್ನು ಜಾರಿಗೆ ತರುವುದು ಬೇಡ ಎಂದು ಮನವಿ ಮಾಡಿದ್ದರು.

ಆದರೆ ಜನಪ್ರತಿನಿಧಿಗಳ ಮಾತಿಗೆ ಕ್ಯಾರೆ ಮಾಡದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ದರ ಹೆಚ್ಚಿಸಿದ್ದು, ನವಯುಗ ಟೋಲ್ ಪ್ಲಾಜಾ, ಉಡುಪಿ ಇದರ ವತಿಯಿಂದ ಡಿ.4ರಿಂದಲೇ ಹೊಸ ದರ ಜಾರಿಗೊಳಿಸುವುದಾಗಿ ಶನಿವಾರ ಪತ್ರಿಕಾ ಜಾಹೀರಾತು ನೀಡಲಾಗಿದೆ. ಜೀಪು, ಸಾಮಾನ್ಯ ಕಾರುಗಳಿಗೆ ಸುರತ್ಕಲ್ ಟೋಲ್ ನಲ್ಲಿ ಸಂಗ್ರಹಿಸುತ್ತಿದ್ದ 60 ರೂ. ಮತ್ತು ಹೆಜಮಾಡಿಯಲ್ಲಿ ಸಂಗ್ರಹಿಸುತ್ತಿದ್ದ 40 ರೂ. ಒಟ್ಟು ಸೇರಿಸಿ 100 ರೂ. ಪಡೆಯಲಾಗುವುದು ಎಂದು ಹೇಳಿದೆ.