LATEST NEWS
ನವರಾತ್ರಿಯಂದು ಜರುಗುವ ಹೂವಿನ ಕೋಲಿನ ಆಚರಣೆ…!
ಬ್ರಹ್ಮಾವರ, ಅಕ್ಟೋಬರ್ 24: ದೇವಾಲಯಗಳ ಊರು ಎಂದೇ ಪ್ರಸಿದ್ಧವಾದ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬಾರ್ಕೂರು ಮಾಸ್ತಿ ಅಮ್ಮನವರ ದೇವಸ್ಥಾನದಲ್ಲಿ ನವರಾತ್ರಿಯ ಪ್ರಯುಕ್ತ ಸಾಂಪ್ರದಾಯಿಕ ಆಚರಣೆಗಳು ನಡೆಯುತ್ತಿವೆ. ಕೋವಿಡ್ ಹಿನ್ನೆಲೆಯಲ್ಲಿ ಅತ್ಯಂತ ಸರಳವಾಗಿ ನವರಾತ್ರಿ ಹಬ್ಬವನ್ನು ಆಚರಿಸಲಾಗುತ್ತಿದೆ.
ದೇವಸ್ಥಾನವನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದೆ. ಮಾಸ್ತಿ ಅಮ್ಮನವರಿಗೆ ಬಗೆಬಗೆಯ ಹೂಗಳಿಂದ ಅಲಂಕಾರ ಮಾಡಿ ಪೂಜಿಸಲಾಗುತ್ತಿದೆ. ಕೋವಿಡ್ ನಿಯಮಾವಳಿಗಳನ್ನು ಪಾಲಿಸಿ ನೂರಾರು ಜನ ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಿದ್ದಾರೆ. ನವರಾತ್ರಿಯ ಸಂದರ್ಭದಲ್ಲಿ ನಡೆಸುವ ಹೂವಿನ ಕೋಲು ಸಾಂಪ್ರದಾಯಿಕ ಜನಪದ ಆಚರಣೆಯನ್ನು ಈ ದೇವಾಲಯದಲ್ಲಿ ನಡೆಸಲಾಯಿತು.
ಯಕ್ಷಗಾನದ ಉಪ ಕಲೆಯಾದ ಈ ಹೂವಿನಕೋಲು ಬ್ರಹ್ಮಾವರ ಕುಂದಾಪುರ ಭಾಗದಲ್ಲಿ ಇಂದಿಗೂ ಜನಜನಿತವಾಗಿದೆ. ಯಕ್ಷಗಾನದ ಹಾಡು ಗಳಿಗೆ ಪುಟ್ಟ ಪುಟ್ಟ ಮಕ್ಕಳು ತಮ್ಮದೇ ಮುಗ್ಧ ಭಾಷೆಯಲ್ಲಿ ಅರ್ಥ ಹೇಳುವ ಮೂಲಕ ಕೈಯಲ್ಲಿ ಹೂವಿನ ಕೋಲನ್ನು ಹಿಡಿದು ಭಾಗಿಯಾಗುತ್ತಾರೆ. ವಿನಾಶದ ಅಂಚಿನಲ್ಲಿರುವ ಅಪರೂಪದ ಹೂವಿನಕೋಲು ಜನಪದ ಕಲೆಯನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಪ್ರತಿ ಬಾರಿ ನವರಾತ್ರಿಗೆ ಮಾಸ್ತಿ ಅಮ್ಮನವರ ದೇವಸ್ಥಾನದಲ್ಲಿ ಹೂವಿನ ಕೋಲಿನ ಆಚರಣೆ ನಡೆಯುತ್ತೆ ಎಂದು ದೇವಸ್ಥಾನದ ಮೊಕ್ತೇಸರ ಅನಂತಪದ್ಮನಾಭ ರಾವ್ ತಿಳಿಸಿದ್ದಾರೆ.