DAKSHINA KANNADA
ಮತ್ತೆ ಕುಸಿದ ಚೆರುವತ್ತೂರಿನ ವೀರಾಮಲ ಬೆಟ್ಟ – ಕನ್ಯಾಕುಮಾರಿ- ಪನ್ವೇಲ್ ರಾಷ್ಟ್ರೀಯ ಹೆದ್ದಾರಿ 66 ಸಂಪೂರ್ಣ ಬಂದ್

ಕಾಸರಗೋಡು ಜುಲೈ 24: ಕಾಸರಗೋಡಿನ ಚೆರುವತ್ತೂರಿನ ವೀರಾಮಲ ಬೆಟ್ಟ ಕುಸಿತವಾಗಿದ್ದು, ಕೇರಳ, ಕನ್ಯಾಕುಮಾರಿ- ಪನ್ವೇಲ್ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್ ಮಾಡಲಾಗಿದೆ. ಸದ್ಯ ಸಂಚಾರಕ್ಕೆ ಬದಲಿ ರಸ್ತೆ ಮಾರ್ಗವನ್ನು ಸ್ಥಳೀಯಾಡಳಿತ ಸೂಚಿಸಿದ್ದು, ಮಣ್ಣು ತೆರವು ಕಾರ್ಯಾಚರಣೆ ಭರದಿಂದ ಸಾಗಿದೆ. ಹೆದ್ದಾರಿಯಲ್ಲಿ ಹೆಚ್ಚಿನ ವಾಹನ ಸಂಚಾರ ಇಲ್ಲದ ಕಾರಣ ಭಾರಿ ಅನಾಹುತ ತಪ್ಪಿದೆ.
ಈ ಹಿಂದೆಯೂ ಇದೆ ಭಾಗದಲ್ಲಿ ಭೂ ಕುಸಿತವಾಗಿ ಮಣ್ಣಿನಡಿ ಸಿಲುಕಿ ಕಾರ್ಮಿಕರು ಪಾರಾಗಿದ್ದರು. ಈ ಭಾಗದಲ್ಲಿ ಹಲವು ಸಮಯದಿಂದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಇಂದು ಮಧ್ಯಾಹ್ನದ ವೇಳೆಗೆ ಸಂಚಾರ ಸಾಮಾನ್ಯ ಸ್ಥಿತಿಗೆ ಬರುವ ನಿರೀಕ್ಷೆಯಿದೆ. ಸದ್ಯ ಸ್ಥಳಕ್ಕೆ ಕಾಸರಗೋಡು ಎಸ್.ಪಿ ವಿಜಯ್ ಭರತ್ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಚೆಂಗಳ-ನೀಲೇಶ್ವರಂ ಮಾರ್ಗವನ್ನು ನಿರ್ಮಿಸುತ್ತಿರುವ ಮೇಘಾ ಎಂಜಿನಿಯರಿಂಗ್ ಕಂಪೆನಿಯ ಅವೈಜ್ಞಾನಿಕ ಬೆಟ್ಟ ಕಡಿಯುವ ಪದ್ಧತಿಗಳಿಂದಾಗಿ ಈ ಪ್ರದೇಶದಲ್ಲಿ ಆಗಾಗ್ಗೆ ಭೂಕುಸಿತಗಳು ಸಂಭವಿಸುತ್ತಿವೆ ಎಂದು ಸಾಮಾಜಿಕ ಕಾರ್ಯಕರ್ತರು ಮತ್ತು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಜೂನ್ 17 ರಂದು ಬೇವಿಂಜೆಯಲ್ಲಿ ಸಂಭವಿಸಿದ ದೊಡ್ಡ ಭೂಕುಸಿತದ ನಂತರ ಅದೇ ಭಾಗದಲ್ಲಿ ಚೆರ್ಕಳ-ಚಟ್ಟಂಚಲ್ ಘಾಟ್ ರಸ್ತೆಯನ್ನು ಸುಮಾರು ಒಂದು ತಿಂಗಳ ಕಾಲ ಮುಚ್ಚಲಾಗಿತ್ತು ಎಂಬುದು ಗಮನಿಸಬೇಕಾದ ಸಂಗತಿ. ಆ ಮಾರ್ಗದಲ್ಲಿ ಸಂಚಾರ ಇತ್ತೀಚೆಗೆ ಪುನರಾರಂಭಗೊಂಡಿತ್ತು.
ಮುಂದಿನ ಸೂಚನೆ ಬರುವವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಚೆರುವತ್ತೂರಿನಿಂದ ನೀಲೇಶ್ವರಕ್ಕೆ ವಾಹನ ಸಂಚಾರ ನಿಷೇಧಿಸಲಾಗಿದೆ. ಮಣ್ಣು ತೆರವುಗೊಳಿಸಿದ ನಂತರ ನಿನ್ನೆ ರಾತ್ರಿಯಿಂದ ಒಂದೇ ಪಥದಲ್ಲಿ ಭಾರೀ ವಾಹನಗಳಿಗೆ ಮಾತ್ರ ಸಂಚರಿಸಲು ಅವಕಾಶ ನೀಡಲಾಗುತ್ತಿದೆ.