DAKSHINA KANNADA
ನಾರ್ಶ ಸಿಂಗಾರಿ ಬೀಡಿ ಮಾಲೀಕರ ಮನೆ ದರೋಡೆ ಪ್ರಕರಣದಲ್ಲಿ ಕೇರಳದ ಪೊಲೀಸ್ ಅಧಿಕಾರಿ ಅರೆಸ್ಟ್

ವಿಟ್ಲ ಫೆಬ್ರವರಿ 16: ರಾಜ್ಯದಲ್ಲಿ ಭಾರೀ ಸುದ್ದಿಯಾಗಿದ್ದ ಸಿಂಗಾರಿ ಬೀಡಿ ಮಾಲೀಕ ಬೋಳಂತೂರು ನಾರ್ಶ ಸುಲೈಮಾನ್ ಹಾಜಿ ಅವರ ಮನೆ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕೇರಳದ ಪೊಲೀಸ್ ಅಧಿಕಾರಿಯೊಬ್ಬರನ್ನು ವಿಟ್ಲ ಪೊಲೀಸರು ಅರೆಸ್ಟ್ ಮಾಡಿದ್ದಾರೆ ಎಂದು ವರದಿಯಾಗಿದೆ. ಆದರೆ ಈ ಬಗ್ಗೆ ಪೊಲೀಸರು ಯಾವುದೇ ಸ್ಪಷ್ಟನೆ ನೀಡಿಲ್ಲ.
ಬೋಳಂತೂರು ನಾರ್ಶ ದಲ್ಲಿರುವ ಸಿಂಗಾರಿ ಬೀಡಿ ಮಾಲೀಕ ಸುಲೇಮಾನ್ ಅವರ ಮನೆಗೆ ನಕಲಿ ಇಡಿ ಅಧಿಕಾರಿಗಳ ಹೆಸರಿನಲ್ಲಿ ನುಗ್ಗಿ 30 ಲಕ್ಷಕ್ಕೂ ಅಧಿಕ ಹಣವನ್ನು ದರೋಡೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೇರಳದ ಕೊಟ್ಟಾಯಂ ನಿವಾಸಿ ಅನಿಲ್ ಫೆರ್ನಾಂಡಿಸ್, ಸಚಿನ್ ಮತ್ತು ಶಬಿನ್ ಎನ್ನುವ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಮತ್ತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತರಲ್ಲಿ ಓರ್ವ ಕೇರಳ ಪೊಲೀಸ್ ಅಧಿಕಾರಿ ಇರುವುದು ಮಾತ್ರ ಇದೀಗ ಶಾಕ್ ನೀಡಿದೆ. ತ್ರಿಶೂರು ಕೊಡಂಗಲ್ಲೂರು ಪೊಲೀಸ್ ಠಾಣೆಯಲ್ಲಿ ಎಎಸ್ಐ ಆಗಿದ್ದ ಶಫೀರ್ ಬಾಬು (49) ಅವನನ್ನು ವಿಟ್ಲ ಪೊಲೀಸರು ಬಂಧಿಸಿ, ಕರೆತಂದಿದ್ದಾರೆ. ಉಳಿದಂತೆ ಸಿಂಗಾರಿ ಬೀಡಿ ಮಾಲಕ ಸುಲೈಮಾನ್ ಆಪ್ತ ನಿರಾಜುದ್ದೀನ್ ನಾರ್ಶ, ಮಟನ್ ಇಕ್ಬಾಲ್, ಮಹಮ್ಮದ್ ಅನ್ಸಾರ್ ಬಂಧಿತ ಆರೋಪಿಗಳು. ಕೇರಳದ ಕೊಡಂಗಲ್ಲೂರು ಪೊಲೀಸ್ ಠಾಣೆಯ ಎಎಸ್ಐ ಶಫೀರ್ ಬಾಬು ನಕಲಿ ಇ.ಡಿ ತಂಡವನ್ನು ಕಟ್ಟಿ ತನ್ನ ಪಾಲಿನ ಮೊತ್ತವನ್ನು ಪಡೆದುಕೊಂಡಿದ್ದಾನೆ ಎಂದು ಹೇಳಲಾಗಿದೆ.
ಈತನೇ ಮಂಗಳೂರಿಗೆ ಆಗಮಿಸಿ ದರೋಡೆಯ ಪ್ಲ್ಯಾನ್ ಮಾಡಿದ್ದ ಎಂದು ತಿಳಿದು ಬಂದಿದೆ. ಅಲ್ಲದೆ ದರೋಡೆ ನಂತರ ಪೊಲೀಸರಿಂದ ತಪ್ಪಿಸಿಕೊಳ್ಳುವ ಬಗ್ಗೆಯೂ ದರೋಡೆಕೋರರಿಗೆ ಮಾಹಿತಿ ನೀಡಿದ್ದ ಎಂದು ಹೇಳಲಾಗಿದೆ. ದರೋಡೆ ಬಳಿಕ ಈತ ತನ್ನ ಮೊತ್ತ ಪಡೆದ ಬಳಿಕ ಎಂದಿನಂತೆ ಪೊಲೀಸ್ ಕೆಲಸಕ್ಕೆ ಹಾಜರಾಗುತ್ತಿದ್ದ. ಕೆಲವೊಮ್ಮೆ ರಜೆ ತೆಗೆಯುತ್ತಿದ್ದ. ಆರಂಭದಲ್ಲಿ ವಿಟ್ಲ ಪೊಲೀಸರು ತಂಡ ರಚಿಸಿ, ಖಚಿತ ಮಾಹಿತಿಯೊಂದಿಗೆ ಕೇರಳಕ್ಕೆ ತೆರಳಿ ದಾಳಿ ಮಾಡುವ ಮಾಹಿತಿ ಈತನಿಗೆ ತಿಳಿದು, ದರೋಡೆಕೋರರು ಪರಾರಿಯಾಗುವಂತೆ ನೋಡಿಕೊಂಡಿದ್ದ. ಈ ಪ್ರಕರಣದಲ್ಲಿ ಪೊಲೀಸರು ಪ್ರಮುಖ ಘಟ್ಟ ತಲುಪಿದ್ದು, ಇನ್ನೂ ಕೆಲ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಇ.ಡಿ ಅಧಿಕಾರಿಯಂತೆ ನಟಿಸಿದ ಪ್ರಧಾನ ಆರೋಪಿಗಾಗಿ ವ್ಯಾಪಕ ಶೋಧ ನಡೆಸಲಾಗುತ್ತಿದೆ.