KARNATAKA
ಮಂಡ್ಯ – ಭೀಕರ ರಸ್ತೆ ಅಪಘಾತದಲ್ಲಿ ಹಸೆಮಣೆ ಏರಬೇಕಾಗಿದ್ದ ಯುವತಿಯ ದುರಂತ ಅಂತ್ಯ
ಮಂಡ್ಯ ಜನವರಿ 19: ಸ್ಕೂಟರ್ ಹಾಗೂ ಬೈಕ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಯುವತಿ ಸಾವನಪ್ಪಿದ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಬಸಾಪುರ ಗೇಟ್ ಬಳಿ ನಡೆದಿದೆ.
ಮೃತರನ್ನು ಮಂಡ್ಯದ ಮಳವಳ್ಳಿ ತಾಲೂಕಿನ ಬಳೆಹೊನ್ನಿಗನ ಗ್ರಾಮದ ಶರಣ್ಯ (26) ಎಂದು ಗುರುತಿಸಲಾಗಿದೆ.
ಬಿ.ಕೆ.ಶರಣ್ಯ ಸ್ವಗ್ರಾಮದಿಂದ ಕಾರ್ಯ ನಿಮಿತ್ತವಾಗಿ ಹಲಗೂರಿಗೆ ತೆರಳುತ್ತಿದ್ದರು. ರಾಷ್ಟ್ರೀಯ ಹೆದ್ದಾರಿಯ-948ರಲ್ಲಿ ಮಳವಳ್ಳಿ ಕಡೆಯಿಂದ ವೇಗವಾಗಿ ಬಂದ ಬೈಕ್ ಸವಾರ ಡಿಕ್ಕಿ ಹೊಡೆದಿದ್ದಾನೆ. ತಲೆಗೆ ಬಲವಾದ ಪೆಟ್ಟು ಬಿದ್ದ ಪರಿಣಾಮ ತೀವ್ರ ರಕ್ತ ಸ್ರಾವಗೊಂಡು ಮೃತಪಟ್ಟಿದ್ದಾರೆ. ಶರಣ್ಯ ಅವರು ನರೇಗಾ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಶರಣ್ಯ ಗೌಡಗೆ ಮುಂದಿನ ತಿಂಗಳು ಫೆಬ್ರವರಿ 16ರಂದು ಮದುವೆ ನಿಶ್ಚಿಯವಾಗಿತ್ತು. ಆದ್ರೆ, ದಾಂಪತ್ಯ ಜೀವನಕ್ಕೆ ಕಾಲಿಡುವ ಮೊದಲೇ ದುರಂತ ಅಂತ್ಯಕಂಡಿದ್ದಾರೆ.
ಕಳೆದ ಒಂದು ವರ್ಷದಿಂದ ಕನಕಪುರ ತಾಲೂಕಿನ ಸಾತನೂರು ಪಂಚಾಯತಿಯಲ್ಲಿ ನರೇಗಾ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ನಿನ್ನೆ ಸ್ವಗ್ರಾಮದಿಂದ ಹಲಗೂರಿಗೆ ಹೋಗ್ತಿದ್ದಾಗ ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಈ ದುರ್ಘಟನೆಯಲ್ಲಿ ತೀವ್ರ ರಸ್ತಸ್ರಾವದಿಂದ ಶರಣ್ಯ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾಳೆ. ಈ ಬಗ್ಗೆ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.