DAKSHINA KANNADA
ನಮಾಜ್ ವಿವಾದ – ಶಾಲೆಯಲ್ಲಿ ಶೈಕ್ಷಣಿಕ ವಿಚಾರ ಹೊರತುಪಡಿಸಿ ಯಾವುದೇ ಕಾರ್ಯಕ್ರಮಕ್ಕೆ ಅವಕಾಶವಿಲ್ಲ
ಪುತ್ತೂರು ಫೆಬ್ರವರಿ 12: ಪುತ್ತೂರಿನ ಅಂಕತ್ತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಯಲ್ಲಿ ವಿಧ್ಯಾರ್ಥಿಗಳು ನಮಾಝ್ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲಾಭಿವೃದ್ಧಿ ಸಮಿತಿ ಮತ್ತು ಶಿಕ್ಷಣ ಇಲಾಖಾ ಅಧಿಕಾರಿಗಳ ಸಭೆ ಮುಕ್ತಾಯವಾಗಿದ್ದು, ಇನ್ನು ಮುಂದೆ ಶಾಲೆಯಲ್ಲಿ ಶೈಕ್ಷಣಿಕ ವಿಚಾರ ಹೊರತುಪಡಿಸಿ ಯಾವುದೇ ಕಾರ್ಯಕ್ರಮಕ್ಕೆ ಅವಕಾಶವಿಲ್ಲ ಎಂಬ ನಿರ್ಣಯಕ್ಕೆ ಬರಲಾಗಿದೆ.
ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಅಂಕತ್ತಡ್ಕ ಶಾಲೆಯಲ್ಲಿ ಕೆಲವು ವಿಧ್ಯಾರ್ಥಿಗಳು ಶಾಲಾ ಕೊಠಡಿಯಲ್ಲಿ ನಮಾಝ್ ಮಾಡುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈಗಾಗಲೇ ರಾಜ್ಯದಲ್ಲಿ ಹಿಜಬ್ ವಿವಾದ ಇನ್ನು ಬಿಸಿಯಾಗಿರುವಾಗಲೇ ಈ ಘಟನೆ ನಡೆದಿದ್ದು, ಹಲವರ ಆಕ್ರೋಶಕ್ಕೆ ಕಾರಣವಾಗಿತ್ತು.
ಈ ಹಿನ್ನಲೆ ಇಂದು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಲೋಕೇಶ್ ನೇತೃತ್ವದಲ್ಲಿ ಎಸ್.ಡಿ.ಎಂ.ಸಿ ಜೊತೆ ಸಭೆ ನಡೆಸಲಾಗಿತ್ತು. ಈ ಸಭೆಯಲ್ಲಿ ಇನ್ನು ಮುಂದೆ ಶಾಲಾ ಕೊಠಡಿಯಲ್ಲಿ ಇಂಥ ಘಟನೆ ಮತ್ತೆ ಮರುಕಳಿಸದಂತೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಇನ್ನು ಮುಂದೆ ಶಾಲೆಯಲ್ಲಿ ಶೈಕ್ಷಣಿಕ ವಿಚಾರ ಹೊರತುಪಡಿಸಿ ಯಾವುದೇ ಕಾರ್ಯಕ್ರಮಕ್ಕೆ ಅವಕಾಶವಿಲ್ಲ, ನಮಾಝ್ ಪ್ರಕರಣ ತಿಳುವಳಿಕೆ ಕೊರತೆಯಿಂದ ನಡೆದಿರುವುದು ಈ ಬಗ್ಗೆ ಎಲ್ಲಾ ಸಮಿತಿ ಸದಸ್ಯರ ಜೊತೆ ಚರ್ಚೆ ನಡೆಸಲಾಗಿದೆ ಎಂದು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಲೋಕೇಶ್ ಹೇಳಿದ್ದಾರೆ.