LATEST NEWS
ನಮಾಜ್ ಮಾಡಿದ ಕೇಸ್ ಕ್ಯಾನ್ಸಲ್ – ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದಕ್ಕೆ ಶರಣ್ ಪಂಪ್ ವೆಲ್ ಮೇಲೆ ಕೇಸ್

ಮಂಗಳೂರು ಮೇ 31: ಕಂಕನಾಡಿ ಮಸೀದಿಯ ಮುಂಭಾಗದ ರಸ್ತೆಯಲ್ಲಿ ನಮಾಜ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಸುಮೋಟೋ ಕೇಸ್ ನ್ನು ರದ್ದುಗೊಳಿಸಲಾಗಿದ್ದು, ಪ್ರಕರಣ ದಾಖಲಿಸಿದ್ದ ಕದ್ರಿಯ ನಗರ ಪೂರ್ವ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸೋಮಶೇಖರ್ ಅವರಿಗೆ ಕಡ್ಡಾಯ ರಜೆ ನೀಡಲಾಗಿದೆ.
ಸಂಚಾರಕ್ಕೆ ಅಡೆತಡೆ ಮಾಡುವ ಉದ್ದೇಶ ಇಲ್ಲದೆ ನಮಾಜ್ ಮಾಡಿರುವುದರಿಂದ ಈ ಪ್ರಕರಣ ದಲ್ಲಿ ನ್ಯಾಯಾಲಯಕ್ಕೆ ‘ಬಿ ರಿಪೋರ್ಟ್’ ಸಲ್ಲಿಸಲಾಗಿದೆ. ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡದೆ ಪ್ರಕರಣ ದಾಖಲಿಸಿದ್ದ ಪೊಲೀಸ್ ಇನ್‌ಸ್ಪೆಕ್ಟರ್ ಅವರನ್ನು ಕಡ್ಡಾಯ ರಜೆಯಲ್ಲಿ ಕಳುಹಿಸಿ, ಎಸಿಪಿ ದರ್ಜೆಯ ಅಧಿಕಾರಿಯನ್ನು ವಿಚಾರಣೆಗೆ ನೇಮಕ ಮಾಡಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.

ಈ ನಡುವೆ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ಆರೋಪದ ಮೇರೆಗೆ ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ವಿಚಾರ ಇದೀಗ ವಿವಾದಕ್ಕೆ ಕಾರಣವಾಗಿದ್ದು, ಮುಸ್ಲಿಂ ಸಂಘಟನೆಯ ಒತ್ತಡಕ್ಕೆ ಮಣಿದು, ಬಿ ವರದಿ ಸಲ್ಲಿಸಿದ್ದು ಸರಿಯಲ್ಲ’ ಎಂದು ವಿಎಚ್‌ಪಿ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ತಿಳಿಸಿದ್ದಾರೆ. ರಾಜ್ಯದಾದ್ಯಂತ ಹೋರಾಟಕ್ಕೆ ಕರೆ ನೀಡುವುದಾಗಿ ಹೇಳಿದ್ದಾರೆ.