LATEST NEWS
ಬಳ್ಪಗ್ರಾಮದಲ್ಲಿ ಪೂರ್ಣಗೊಂಡ ಕಾಮಗಾರಿಗಳ ಪಟ್ಟಿ ಒದಗಿಸಲು ಸಂಸದರ ಸೂಚನೆ
ಮಂಗಳೂರು ಅಗಸ್ಟ್ 24: ಸಂಸದರ ಆದರ್ಶ ಗ್ರಾಮದಡಿ ಆಯ್ಕೆಯಾಗಿರುವ ಕಡಬ ತಾಲೂಕಿನ ಬಳ್ಪ ಗ್ರಾಮದ ಸಂಪೂರ್ಣ ಅಭಿವೃದ್ಧಿಗಾಗಿ ಹಲವಾರು ಕಾಮಗಾರಿಗಳು ಹಾಗೂ ವಿವಿಧ ಯೋಜನೆಗಳ ಅನುಷ್ಠಾನಕ್ಕೆ 60 ಕೋಟಿ ರೂ.ಗಳನ್ನು ಒದಗಿಸಲಾಗಿದೆ, ಬರುವ ಸೆಪ್ಟಂಬರ್ 2ರಂದು ಅಲ್ಲಿ ಪೂರ್ಣಗೊಂಡಿರುವ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಇನ್ನೂ ನೆರವೇರಿಸಬೇಕಾಗಿರುವ ಕಾಮಗಾರಿಗಳಿಗೆ ಶಿಲನ್ಯಾಸ ನೆರವೇರಿಸಲು ಪಟ್ಟಿಯೊಂದನ್ನು ಸಿದ್ದಪಡಿಸುವಂತೆ ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರು ಬಳ್ಪ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಸೂಚನೆ ನೀಡಿದರು.
ಸಂಸದರ ಆದರ್ಶ ಗ್ರಾಮದಲ್ಲಿ ದೇಶದ ಯಾವುದೇ ಗ್ರಾಮದಲ್ಲೂ 60 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿಲ್ಲ, ಜಿಲ್ಲೆಯ ಬಳ್ಪ ಗ್ರಾಮದಲ್ಲಿ ಮಾತ್ರ ಇಷ್ಟು ಮೊತ್ತದ ಹಣವನ್ನು ಖರ್ಚು ಮಾಡಲಾಗುತ್ತಿದೆ, ಅಲ್ಲಿ ಪೂರ್ಣಗೊಂಡಿರುವ ಕಾಮಗಾರಿಗಳನ್ನು ಸೆಪ್ಟಂಬರ್ 2ರಂದು ಲೋಕಾರ್ಪಣೆ ಮಾಡಲಾಗುವುದು ಹಾಗೂ ಬಾಕಿ ಉಳಿದ ಕಾಮಗಾರಿಗಳಿಗೆ ಶಿಲನ್ಯಾಸ ನೆರವೇರಿಸಲು ಪಟ್ಟಿ ಸಿದ್ದಪಡಿಸುವಂತೆ ತಿಳಿಸಿದರು.
ಕಲ್ಲಡ್ಕ ಫ್ಲೈ ಓವರ್ ಕಾಮಗಾರಿಗಳನ್ನು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಸಂಸದರು ಸೂಚಿಸಿದಾಗ, ಮುಂದಿನ ವರ್ಷದ ಅಕ್ಟೋಬರ್ ಅಥವಾ ನವೆಂಬರ್‍ನಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಲಿಂಗೇಗೌಡ ತಿಳಿಸಿದರು.
ಸೆಪ್ಟೆಂಬರ್ 2 ರಂದು ಮಂಗಳೂರಿಗೆ ಪ್ರಧಾನ ಮಂತ್ರಿಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ಸ್ಮಾರ್ಟ್ ಸಿಟಿ ವತಿಯಿಂದ ಇದುವರೆಗೂ ಕೈಗೊಂಡ ಕಾಮಗಾರಿಗಳಲ್ಲಿ ಪೂರ್ಣಗೊಂಡ ಕಾಮಗಾರಿಗಳ ಪಟ್ಟಿಗಳನ್ನು ನೀಡುವಂತೆ ಸಂಸದರು ತಿಳಿಸಿದರು. ಈ ಕಾಮಗಾರಿಗಳನ್ನು ಪ್ರಧಾನ ಮಂತ್ರಿಗಳಿಂದ ಉದ್ಘಾಟಿಸಲು ಅನುಕೂಲವಾಗುವುದು ಹಾಗಾಗಿ ಕೂಡಲೇ ಪಟ್ಟಿ ಒದಗಿಸುವಂತೆ ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ತಿಳಿಸಿದರು.