LATEST NEWS
ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ನಳಿನ್ ಕುಮಾರ್ ಬಿಜೆಪಿ ಅಭ್ಯರ್ಥಿ ?
ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ನಳಿನ್ ಕುಮಾರ್ ಬಿಜೆಪಿ ಅಭ್ಯರ್ಥಿ ?
ಮಂಗಳೂರು ಫೆಬ್ರವರಿ 7: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಚುನಾವಣಾ ಕಣ ರಂಗೇರುತ್ತಿದೆ. ರಾಜಕೀಯ ಪಕ್ಷಗಳ ಚಟುವಟಿಕೆ ಬಿರುಸುಗೊಂಡಿದ್ದು ಚುನಾವಣಾ ಅಖಾಡಕ್ಕಿಳಿಸಲು ಅಭ್ಯರ್ಥಿಗಳ ಆಯ್ಕೆ ಆರಂಭವಾಗಿದೆ.
ದಕ್ಷಿಣಕನ್ನಡ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳ ಪೈಕಿ ಅತ್ಯಂತ ಕುತೂಹಲ ಕೆರಳಿಸಿದ ಕ್ಷೇತ್ರ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರ ಈ ಕ್ಷೇತ್ರದಲ್ಲಿ ಕಾಂಗ್ರೇಸ್ ನಿಂದ ಶಾಸಕ ಜೆ.ಆರ್ ಲೋಬೊ ಸ್ಪರ್ಧಿಸುವುದು ಖಚಿತಗೊಂಡಿದೆ. ಆದರೆ ಬಿಜೆಪಿ ಪಾಳಯದಲ್ಲಿ ಅಭ್ಯರ್ಥಿಯ ಆಯ್ಕೆ ಕಗ್ಗಂಟಾಗುತ್ತಾ ಸಾಗಿದೆ.
ಮಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿಯಲ್ಲಿ ಆಕಾಂಕ್ಷಿಗಳ ಪಟ್ಟಿ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಜಿಎಸ್ ಬಿ ಸಮುದಾಯಕ್ಕೆ ಸೇರಿದ ಉದ್ಯಮಿಗಳಾದ ವೇದವ್ಯಾಸ ಕಾಮತ್, ಬದ್ರಿನಾಥ್ ಕಾಮತ್, ಮಾಜಿ ಶಾಸಕ ಯೋಗಿಶ್ ಭಟ್, ಮಾಜಿ ವಿಧಾನಪರಿಷತ್ ಸದಸ್ಯ ಯುವ ಬಿಜೆಪಿ ಮುಖಂಡ ಬ್ರಿಜೇಶಷ್ ಚೌಟ ಸೇರಿದಂತೆ ಒಟ್ಟು 7 ಮಂದಿ ಟಿಕೇಟ್ ಆಕಾಂಕ್ಷಿಗಳಿದ್ದಾರೆ.
ಈಗಾಗಲೇ ಅಭ್ಯರ್ಥಿಯ ಆಯ್ಕೆಗೆ ಆಂತರಿಕ ಬೈಠಕ್ ನಡೆಸಲಾಗಿದ್ದು ಮೂರು ಸುತ್ತಿನ ಚರ್ಚೆಯ ಬಳಿಕವೂ ಅಭ್ಯರ್ಥಿಗಳ ಆಯ್ಕೆ ಕಗ್ಗಾಂಟಾಗಿಯೇ ಉಳಿದಿದೆ.
ಈ ನಡುವೆ ಪಕ್ಷದ ಮುಖಂಡರ ಆಂತರಿಕ ಬೈಠಕ್ ನಲ್ಲಿ ಒಮ್ಮತದ ಅಭ್ಯರ್ಥಿ ಸಫಲವಾಗದಿದ್ದರೆ, ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ನಳಿನ್ ಕುಮಾರ್ ಕಟೀಲ್ ಅವರನ್ನು ಮಂಗಳೂರು ದಕ್ಷಿಣ ಕ್ಷೇತ್ರದಿಂದ ಕಣಕ್ಕಿಳಿಸಿ ರಾಜ್ಯ ರಾಜಕಾರಣಕ್ಕೆ ಕರೆ ತರುವ ಪ್ರಯತ್ನ ನಡೆಯುತ್ತಿದೆ. ಈ ಪ್ರಸ್ತಾಪ ಕಳೆದ 1 ವರ್ಷಗಳಿಂದ ಹರಿದಾಡುತ್ತಿದ್ದರೂ ಈಗ ಅದಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ.
ನಳಿನ್ ಅವರನ್ನು ಕಣಕ್ಕಿಳಿಸಿ ಮಂಗಳೂರು ದಕ್ಷಿಣ ಕ್ಷೇತ್ರವನ್ನು ಮತ್ತೆ ವಶಪಡಿಸಿಕೊಳ್ಳುವ ತಂತ್ರಗಾರಿಕೆ ಬಿಜೆಪಿ ತಯಾರಿ ನಡೆಸಿದೆ ಎಂದು ಹೇಳಲಾಗಿದೆ.