BANTWAL
ನಿಧಿ ಆಸೆಗೆ ನಾಗಬನ ಅಗೆದ ಕಳ್ಳರು

ಬಂಟ್ವಾಳ ಅಕ್ಟೋಬರ್ 23: ನಿಧಿ ಸಿಗುತ್ತೆ ಎಂಬ ಆಸೆಗೆ ನಿಧಿಗಳ್ಳರು ಹಳೆಯ ಪುರಾತನ ಹುತ್ತವೊಂದನ್ನು ಅಗೆದಿರುವ ಘಟನೆ ಬಂಟ್ವಾಳ ತಾಲೂಕಿನ ಇರಾ ಗ್ರಾಮದಲ್ಲಿ ನಡೆದಿದೆ.
ಬಂಟ್ವಾಳ ತಾಲೂಕಿನ ಪ್ರಸಿದ್ಧ ಇರಾ ಶ್ರೀ ಕುಂಡಾವು ಸೋಮನಾಥೇಶ್ವರ ದೇವಸ್ಥಾನಕ್ಕೆ ಸಂಬಂಧಪಟ್ಟ ಬಪ್ಪರ ಕಂಬಳದ ಬಳಿಯಿರುವ ನಾಗ ಬನದ ಪಕ್ಕದ ಹುತ್ತವೊಂದರಲ್ಲಿ ಸುಮಾರು ಹತ್ತು ಅಡಿ ಅಗೆದಿದ್ದಾರೆ. ಇದು ಇಂದು ಬೆಳಿಗ್ಗೆ ಭಕ್ತರ ಗಮನಕ್ಕೆ ಬಂದಿದೆ.
ಕಳ್ಳರು ನಿಧಿ ಆಸೆಯಿಂದ ಭೂಮಿಯನ್ನು ದೇವಸ್ಥಾನಕ್ಕೆ ಸಂಬಂಧಪಟ್ಟ ನಾಗಬನಕ್ಕೆ ನಾಗನ ಕಟ್ಟೆ ಕಟ್ಟಲಾಗಿದೆ, ಮಣ್ಣು ಅಗೆಯುವ ವೇಳೆ ನಾಗನ ಕಟ್ಟೆಗೆ ಯಾವುದೇ ಹಾನಿ ಮಾಡಿಲ್ಲ. ಈ ಭಾಗದಲ್ಲಿ ನಿಧಿ ಇದೆ ಎಂಬುದನ್ನು ಹಿಂದಿನ ಕಾಲದ ಜನರು ಆಡಿಕೊಳ್ಳುವುದನ್ನು ಕೇಳಿ ಅದು ಜನರ ಬಾಯಿಂದ ಕಿವಿಗೆ ಹರಡಿ ಮೂಢನಂಬಿಕೆಯಿಂದ ಕಳ್ಳರು ನಿಧಿ ಶೋಧ ನಡೆಸಿದ್ದಾರೆ.

ನಾಗಬನದ ಆಸುಪಾಸಿನಲ್ಲಿ ಕಂಬಳ ಗದ್ದೆ ಎಲ್ಲ ಧಾರ್ಮಿಕ ನೆಲೆಗಟ್ಟಿನಲ್ಲಿ ಕಾರಣಿಕ ಬೀರುತ್ತಿರುವುದರಿಂದ ಅಲ್ಲೆಲ್ಲ ನಿಧಿ ಇರುತ್ತದೆ, ನಾಗ ಕಾವಲು ಕಾಯುತ್ತಾನೆ ಎಂಬ ಪ್ರತೀತಿ ಇದ್ದು, ಈ ಆಸೆಯಿಂದ ಕಳ್ಳರು ಭೂಮಿ ಅಗೆದಿದ್ದಾರೆ ಎನ್ನಲಾಗುತ್ತಿದೆ.