KARNATAKA
ಮೈಸೂರು ಗ್ಯಾಂಗ್ ರೇಪ್ ಪ್ರಕರಣ – ಆರೋಪಿಗಳು ಪೊಲೀಸರ ವಶಕ್ಕೆ

ಮೈಸೂರು ಅಗಸ್ಟ್ 28: ಚಾಮುಂಡಿಬೆಟ್ಟದ ತಪ್ಪಲಿನ ಲಲಿತಾದ್ರಿಪುರ ಗುಡ್ಡದಲ್ಲಿ ನಡೆದ ಕಾಲೇಜು ವಿಧ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಮಂದಿ ಆರೋಪಿಗಳನ್ನು ತಮಿಳು ನಾಡಿನಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.ಘಟನೆ ನಡೆದ 85 ಗಂಟೆ ಬಳಿಕ ಶನಿವಾರ ಬೆಳಗ್ಗೆ ನಾಲ್ಕರಿಂದ ಐದು ಮಂದಿ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ, ಓರ್ವ ತಲೆಮರೆಸಿಕೊಂಡಿದ್ದು ಆತನ ಹುಡುಕಾಟ ನಡೆಯುತ್ತಿದೆ ಎಂದು ಮಾಹಿತಿ ಸಿಕ್ಕಿದೆ.
ವಶಕ್ಕೆ ಸಿಕ್ಕಿರುವ ನಾಲ್ವರು ತಮಿಳು ನಾಡು ಮೂಲದವರು ಎಂದು ತಿಳಿದುಬಂದಿದೆ. ಘಟನಾ ಸ್ಥಳದಲ್ಲಿ ದೊರೆತ ಮೊಬೈಲ್ ಸಿಗ್ನಲ್ ಆಧಾರದ ಮೇಲೆ ಸುಮಾರು 10 ಮಂದಿಯ ಮೇಲೆ ಶಂಕೆ ಉಂಟಾಗಿದೆ. ಇವರಲ್ಲಿ ಕೆಲವರು ಕೇರಳ ಮತ್ತು ತಮಿಳುನಾಡಿಗೆ ಹೋಗಿದ್ದಾರೆ. ಹಾಗಾಗಿ ಪೊಲೀಸರ ತಂಡಗಳು ತಮಿಳುನಾಡು ಮತ್ತು ಕೇರಳಕ್ಕೆ ಶುಕ್ರವಾರ ತೆರಳಿದ್ದವು. ಶುಕ್ರವಾರ ತಡರಾತ್ರಿಯ ಹೊತ್ತಿಗೆ ನಾಲ್ವರನ್ನು ತಮಿಳುನಾಡಿನಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.ಆದರೆ ಈವರೆಗೂ ಇವರೆ ಆರೋಪಿಗಳು ಎಂದು ಖಚಿತಪಟ್ಟಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
