KARNATAKA
ಮೈಸೂರು: ಚಳಿ ತಡೆಯಲಾಗದೆ ರಾತ್ರಿ ಮಲಗಿದ್ದಲ್ಲೇ ವ್ಯಕ್ತಿ ಸಾವು?
ಮೈಸೂರು: ಪತ್ನಿಯನ್ನು ಹೆರಿಗೆಗೆ ಕರೆದುಕೊಂಡು ಬಂದಿದ್ದ ವ್ಯಕ್ತಿಯೊಬ್ಬರು ನಗರದ ಚಲುವಾಂಬ ಆಸ್ಪತ್ರೆ ಆವರಣದಲ್ಲಿಯೇ ಸಾವನ್ನಪ್ಪಿದ್ದು, ಕೊರೆಯುವ ಚಳಿ ತಡೆಯಲಾರದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಗುಂಡ್ಲುಪೇಟೆ ತಾಲೂಕು ಚೌಡಳ್ಳಿ ಗ್ರಾಮದ ನಾಗೇಶ್ (35) ಮೃತಪಟ್ಟವರು. ರವಿವಾರ ರಾತ್ರಿ 10.30ರ ಸುಮಾರಿಗೆ ಆಸ್ಪತ್ರೆಯ ಆವರಣದಲ್ಲಿ ನಾಗೇಶ್ ಮಲಗಿದ್ದು, ಸೋಮವಾರ ಬೆಳಗ್ಗೆ 6 ಗಂಟೆ ಸಮಯದಲ್ಲಿ ನೋಡಿದಾಗ ಮಲಗಿದ್ದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಹೆರಿಗೆಗೆಂದು ಪತ್ನಿ ಅಶ್ವತ್ಥಮ್ಮ ಅವರನ್ನು ನಾಗೇಶ್ ಚಲುವಾಂಬ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಶನಿವಾರ ಬೆಳಗ್ಗೆ ಹೆರಿಗೆ ಆಗಿದ್ದು, ಗಂಡು ಮಗು ಜನಿಸಿದೆ. ಮರಣೋತ್ತರ ಪರೀಕ್ಷೆ ಬಳಿಕ ನಾಗೇಶ್ ಸಾವಿನ ನಿಖರ ಕಾರಣ ತಿಳಿದು ಬರಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಡಾರ್ಮೆಟರಿ ವ್ಯವಸ್ಥೆ ಇದ್ದರೂ ನಾಗೇಶ್ ಆಸ್ಪತ್ರೆಯ ಆವರಣದಲ್ಲಿ ಮಲಗಿದ್ದರು. ಮಲಗಿದ್ದಾಗಲೇ ಸಾವನ್ನಪ್ಪಿದ್ದು, ಪೊಲೀಸರಿಗೆ ಮಾಹಿತಿ ತಿಳಿಸಿದ್ದೇವೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ| ಸುಧಾ ತಿಳಿಸಿದ್ದಾರೆ.