LATEST NEWS
ಪ್ರಿಯತಮೆಯ ಮೇಲೆ ಕಾರು ಹರಿಸಿದ ಐಎಎಸ್ ಅಧಿಕಾರಿಯ ಮಗ
ಮುಂಬೈ ಡಿಸೆಂಬರ್ 16: ಮಹಾರಾಷ್ಟ್ರದ ಐಎಎಸ್ ಅಧಿಕಾರಿಯ ಮಗ ಬಿಜೆಪಿಯ ಯುವ ಮೋರ್ಚಾದ ಮುಖಂಡನೊಬ್ಬ ತನ್ನ ಪ್ರೇಯಸಿಯ ಮೇಲೆ ಕಾರು ಹರಿಸಿ ಕೊಲೆಗೆ ಯತ್ನಿಸಿದ ಘಟನೆ ಥಾಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಥಾಣೆ ವಿಭಾಗದ ಭಾರತೀಯ ಜನತಾ ಪಕ್ಷದ ಯುವ ಮೋರ್ಚಾ ಅಧ್ಯಕ್ಷ ಅಶ್ವಜಿತ್ ಗಾಯಕ್ವಾಡ್ ವಿರುದ್ಧ ಕೇಸ್ ದಾಖಲಾಗಿದೆ.
ಗಾಯಾಳು ಗೆಳತಿಯನ್ನು ಪ್ರಿಯಾ ಎಂದು ಗುರುತಿಸಲಾಗಿದೆ. ಮಾಡೆಲ್ ಪ್ರಿಯಾ ಸಿಂಗ್ ತನ್ನ ಬಾಯ್ ಫ್ರೆಂಡ್ ನಿಂದ ತಮಗಾದ ಕೆಟ್ಟ ಅನುಭವವನ್ನು Instagram ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ. ಆಕೆಯ ಪ್ರಿಯಕರ ಅಶ್ವಜಿತ್ ತನ್ನನ್ನು ಅಮಾನುಷವಾಗಿ ಥಳಿಸಿ ಕಾರಿನಲ್ಲಿ ಎಳೆದೊಯ್ದಿದ್ದಾನೆ ಎಂಬುದು ಮಹಿಳೆಯ ದೂರು. ದೇಹದಾದ್ಯಂತ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಿತ್ರಗಳನ್ನೂ ಯುವತಿ ಬಿಡುಗಡೆ ಮಾಡಿದ್ದಾರೆ.
ಪ್ರಿಯಾ ಸಿಂಗ್ ಅವರು Instagram ನಲ್ಲಿ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಪ್ರಭಾವಶಾಲಿಯಾಗಿದ್ದಾರೆ. ಕಳೆದ ನಾಲ್ಕೂವರೆ ವರ್ಷಗಳಿಂದ ಅಶ್ವಜಿತ್ ಜೊತೆ ಅನ್ಯೋನ್ಯವಾಗಿದ್ದೇನೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ. ಡಿಸೆಂಬರ್ 11 ರಂದು ಅಶ್ವಜಿತ್ ತನ್ನನ್ನು ಥಳಿಸಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಹಿಳೆ ಹೇಳಿದ್ದಾರೆ. ಸಂಸಾರದಲ್ಲಿ ಯಾವುದೋ ಕಾರ್ಯಕ್ರಮವಿದೆ ಎಂದು ಗೆಳೆಯ ಕರೆ ಮಾಡಿದ್ದರಿಂದ ಆತ ಸ್ಥಳಕ್ಕೆ ಹೋಗಿದ್ದಾಳೆ. ಈ ವೇಳೆ ಆರೋಪಿ ಅಶ್ವಜಿತ್ ಪ್ರಿಯಾಳ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಅಲ್ಲದೆ ಈ ವೇಳೆ ಆಕೆಯ ಮೇಲೆ ಕಾರನ್ನು ಹತ್ತಿಸಿ ಕೊಲೆ ಮಾಡಲು ಪ್ರಯತ್ನಿಸಿದ್ದು, ಆಕೆಗೆ ಗಂಭೀರಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಸದ್ಯ ಪ್ರಿಯಾ ಆರೋಪಗಳನ್ನೆಲ್ಲಾ ಅಶ್ವಜಿತ್ ತಿರಸ್ಕರಿಸಿದ್ದು, ಹಣಕ್ಕಾಗಿ ಈ ರೀತಿ ಮಾಡುತ್ತಿದ್ದಾಳೆ. ಅಲ್ಲದೇ ಅವಳು ಬಿಂಬಿಸಿದ್ದೆಲ್ಲ ಸುಳ್ಳಾಗಿದೆ. ಪ್ರಿಯಾ ನನಗೆ ಜಸ್ಟ್ ಫ್ರೆಂಡ್ ಅಷ್ಟೇ ಎಂದು ಪೊಲೀಸರ ಮುಂದೆ ಅಶ್ವಜಿತ್ ಹೇಳಿದ್ದಾನೆ. ನಾನು ಕುಟುಂಬದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಹೋಟೆಲ್‍ಗೆ ಕುಡಿದ ಅಮಲಿನಲ್ಲಿ ಬಂದಿದ್ದ ಪ್ರಿಯಾ, ತನ್ನೊಂದಿಗೆ ಮಾತನಾಡುವಂತೆ ಒತ್ತಾಯಿಸಿದಳು. ಈ ವೇಳೆ ನಾನು ನಿರಾಕರಿಸಿದಾಗ ಆಕೆ ನನ್ನ ಮೇಲೆ ದೌರ್ಜನ್ಯ ಎಸಗಿದಳು. ಅಲ್ಲದೆ ನನ್ನ ಸ್ನೇಹಿತರು ಈ ವಿಚಾರದಲ್ಲಿ ಮಧ್ಯಪ್ರವೇಶಿಸಲು ಮುಂದಾದಾಗ ಅವರ ಮೇಲೂ ಹಲ್ಲೆ ನಡೆಸಿದ್ದಾಳೆ. ನನ್ನ ಡ್ರೈವರ್ ಶೆಲ್ಕೆ, ಅವಳು ಪಕ್ಕಕ್ಕೆ ಹೋಗುವಂತೆ ನನ್ನ ಕಾರನ್ನು ಸ್ಟಾರ್ಟ್ ಮಾಡಿದರು. ಆದರೆ ಕಾರು ಸ್ವಲ್ಪ ತಾಗಿ ಕೆಳಗೆ ಬಿದ್ದಳು. ಈ ಅಪಘಾತ ಉದ್ದೇಶಪೂರ್ವಕವಲ್ಲ ಎಂದು ವಿವರಿಸಿದ್ದಾನೆ.
ಡಿಸೆಂಬರ್ 11 ರಂದು ಥಾಣೆಯ ಹೋಟೆಲ್ ಬಳಿ ಅಶ್ವಜಿತ್ ಕಾರು ಮೂವ್ ಮಾಡಿದ ಸಂದರ್ಭದಲ್ಲಿ ಪ್ರಿಯಾ ಕಾಲಿನ ಮೇಲೆ ಹರಿದು ಗಂಭೀರ ಗಾಯಗಳಾಗಿವೆ. ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಘಟನೆಯ ನಂತರ ಅಶ್ವಜಿತ್ ಮತ್ತು ಇತರ ಇಬ್ಬರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 279 (ಅತುರದಿಂದ ಚಾಲನೆ), 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಮತ್ತು ಇತರರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.