KARNATAKA
ಒಂದೇ ಕುಟುಂಬದ ನಾಲ್ವರ ಹತ್ಯೆ: ಪ್ರಕರಣ ದಾಖಲಾದ 6 ಗಂಟೆಯಲ್ಲಿ ಆರೋಪಿಯ ಬಂಧನ

ಕೊಡಗು, ಮಾರ್ಚ್ 29: ಕೊಡಗಿನ ಪೊನ್ನಂಪೇಟೆಯಲ್ಲಿ ಒಂದೇ ಕುಟುಂಬದ ನಾಲ್ಕು ಜನರನ್ನು ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು 6 ಗಂಟೆಯ ಒಳಗೆ ಬಂಧಿಸುವಲ್ಲಿ ಕೊಡಗು ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಶುಕ್ರವಾರ (ಮಾ.28) ಮಧ್ಯಾಹ್ನ ಸುಮಾರು 01.30ರ ಸುಮಾರಿಗೆ ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬೇಗೂರು ಗ್ರಾಮ ಬಾಳಂಗಾಡು ಪ್ರದೇಶದ ಒಂಟಿ ಮನೆಯಲ್ಲಿ ನಾಲ್ಕು ಜನರ ಭೀಕರ ಕೊಲೆಯಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮತ್ತು ಅಪರಾಧ ಪತ್ತೆ ತಜ್ಞರ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಅಪರಾಧ ಕೃತ್ಯದ ಕುರಿತು ಮಾಹಿತಿ ಹಾಗೂ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿದ್ದರು.

ಬಳಿಕ ದೂರುದಾರರು ನೀಡಿದ ಮಾಹಿತಿ ಅನ್ವಯ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಸಲಾಯಿತು. ತಲೆಮರೆಸಿಕೊಂಡಿರುವ ಆರೋಪಿ ಪತ್ತೆಗಾಗಿ ವಿರಾಜಪೇಟೆ ಉಪವಿಭಾಗ ಡಿಎಸ್‌ಪಿ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆ ಕೈಗೊಂಡಿದ್ದರು.
ಘಟನೆಯ ವಿವರ: ಕೊಲೆಯಾದ ಬುಡಕಟ್ಟು ಜನಾಂಗದ ಕರಿಯ, ಗೌರಿ, ನಾಗಿ(30), ಕಾವೇರಿ(7) ಹಾಗೂ ಆರೋಪಿ ಗಿರೀಶ್ (38) ಒಂಟಿ ಮನೆಯಲ್ಲಿ ವಾಸವಿದ್ದರು. ಆರೋಪಿ ಗಿರೀಶ್ ಮೃತ ಮಹಿಳೆ ನಾಗಿಯ ಮೂರನೇ ಗಂಡನಾಗಿದ್ದು, ಒಂದು ವರ್ಷದಿಂದ ಒಟ್ಟಿಗೆ ವಾಸವಿದ್ದರು. ನಾಗಿಯ ಎರಡನೇ ಗಂಡ ಸುಬ್ರಮಣಿಯೊಂದಿಗೆ ಮತ್ತೆ ಸಂಬಂಧವಿರುವ ಬಗ್ಗೆ ಸಂಶಯದಿಂದ ಆರೋಪಿ ಗಿರೀಶ್ 27ರ (ಗುರುವಾರ) ರಾತ್ರಿ ಸಮಯದಲ್ಲಿ ಕರಿಯ (ನಾಗಿಯ ಅಜ್ಜ), ಗೌರಿ (ನಾಗಿಯ ಅಜ್ಜಿ), ನಾಗಿ, ಮತ್ತು ಕಾವೇರಿ (ಗಿರೀಶ್ನ ಮಲ ಮಗಳು)ನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ.
ಸದ್ಯ ಪ್ರಕರಣದ ಆರೋಪಿಯನ್ನು ಪ್ರಕರಣ ದಾಖಲಾದ ಕೇವಲ 6 ಗಂಟೆಯಲ್ಲಿ ಕೇರಳ ರಾಜ್ಯದ ತಲಪುಳ ಎಂಬ ಸ್ಥಳದಲ್ಲಿ ವಿಶೇಷ ತನಿಖಾ ತಂಡವು ದಸ್ತಗಿರಿ ಮಾಡಿ ಕಾನೂನು ಕ್ರಮ ಕೈಗೊಂಡಿದೆ. ಈ ಬಗ್ಗೆ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
1 Comment