LATEST NEWS
ಮುಂಬೈ ಸಿವಿಲ್ ಆಸ್ಪತ್ರೆಯಲ್ಲಿ ಬೆಂಕಿ ಅವಘಢ – 10 ಮಂದಿ ಸಜೀವ ದಹನ

ಮುಂಬೈ ನವೆಂಬರ್ 06: ಮಹಾರಾಷ್ಟ್ರದ ಅಹ್ಮದ್ ನಗರದ ಸಿವಿಲ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಸಂಭವಿಸಿದ ಬೃಹತ್ ಪ್ರಮಾಣದ ಬೆಂಕಿ ಅವಘಡದಲ್ಲಿ ಕನಿಷ್ಠ 10 ಮಂದಿ ರೋಗಿಗಳು ಸಜೀವ ದಹನವಾಗಿದ್ದು, ಸಾವು-ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.
ಮಹಾರಾಷ್ಟ್ರದ ಅಹ್ಮದ್‍ನಗರದಲ್ಲಿರುವ ಜಿಲ್ಲಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇಂದು ಬೆಳಗ್ಗೆ ಸುಮಾರು 11 ಗಂಟೆಗೆ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ಅವಘಡ ನಡೆಯುವ ಸಂದರ್ಭದಲ್ಲಿ ಐಸಿಯುನಲ್ಲಿ ಕನಿಷ್ಠ 20 ಮಂದಿ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರು. ಬೆಂಕಿ ಅವಘಡ ಸುದ್ದಿ ಹೊರಬರುತ್ತಿದ್ದಂತೆ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳ ಸಂಬಂಧಿಕರು ಭಯ, ಆತಂಕದಿಂದ ಆಸ್ಪತ್ರೆಗೆ ದೌಡಾಯಿಸಿದ್ದಾರೆ.

ಬೆಳಗ್ಗೆ 11 ಗಂಟೆಯ ಹೊತ್ತಿಗೆ ಬೆಂಕಿಯನ್ನು ನಂದಿಸಲಾಯಿತಾದರೂ ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಐಸಿಯು ಬೆಂಕಿಗೆ ಹೆಚ್ಚಿನ ಪ್ರಮಾಣದಲ್ಲಿ ಆಹುತಿಯಾಗಿದ್ದು ಸಾವು ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಸ್ಥಳಕ್ಕೆ ಹಿರಿಯ ಪೊಲೀಸರು, ಅಗ್ನಿಶಾಮಕ ಅಧಿಕಾರಿಗಳು ಆಗಮಿಸಿದ್ದು ರಕ್ಷಣಾ ಮತ್ತು ಪರಿಹಾರ ಕಾರ್ಯಗಳ ನಿಗಾ ವಹಿಸುತ್ತಿದ್ದಾರೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದ್ದು ತನಿಖೆ ನಡೆಸಲಾಗುತ್ತಿದೆ