LATEST NEWS
ಮುಲ್ಕಿ – ಮರುವಾಯಿ ಹೆಕ್ಕಲು ಹೋಗಿ ನೀರುಪಾಲಾದ ಯುವಕ
ಮೂಲ್ಕಿ ಮೇ 13: ಮರುವಾಯಿ ಹೆಕ್ಕಲು ನದಿಗಳಿದ ಯುವಕನೊಬ್ಬ ನೀರುಪಾಲಾಗಿರುವ ಘಟನೆ ಕೊಳಚಿಕಂಬಳ ಬಳಿ ನಡೆದಿದೆ. ನಾಪತ್ತೆಯಾದ ಯುವಕನನ್ನು ಬಜಪೆಯ ಅದ್ಯಪಾಡಿಯ ಹಳೆ ವಿಮಾನ ನಿಲ್ದಾಣ ಬಳಿಯ ನಿವಾಸಿ ಅಭಿಲಾಷ್(24) ಎಂದು ಗುರುತಿಸಲಾಗಿದೆ.
ಬಜಪೆಯ ಅದ್ಯಪಾಡಿಯ ಸುಮಾರು 10 ಯುವಕರ ತಂಡ ಮರುವಾಯಿ ಹೆಕ್ಕಲು ಆಗಮಿಸಿದ್ದು, ಅದರಲ್ಲಿ ನಾಲ್ವರು ಮರುವಾಯಿ ಹೆಕ್ಕುವುದಕ್ಕಾಗಿ ಸಸಿಹಿತ್ಲು ಮುಂಡಾ ಬೀಚ್ ಬಳಿಯ ಅಳಿವೆಯ ಬಳಿ ನದಿಗೆ ಇಳಿದಿದ್ದರು. ಉಳಿದ ಆರು ಮಂದಿ ದಡದಲ್ಲಿಯೇ ಇದ್ದರು, ನೀರಿಗೆ ಇಳಿದವರಲ್ಲಿ ಈಜು ಬಾರದ ಕಾರಣ ಕೆಲವು ಯುವಕರು ನೀರಿನಲ್ಲಿ ಮುಳುಗಡೆಯಾಗುವ ಹಂತಕ್ಕೆ ಹೋಗಿದ್ದರು. ಈ ವೇಳೆ ಅಭಿಲಾಷ್ (24) ಉಳಿದವರನ್ನು ಬದುಕಿಸಲು ಹೋಗಿ ತಾನು ಜೀವ ಕಳೆದುಕೊಂಡಿದ್ದಾರೆ. ಯುವಕರ ಬೊಬ್ಬೆ ಕೇಳಿ ಧಾವಿಸಿ ಬಂದ ಮೀನುಗಾರರು ಮೂವರನ್ನು ರಕ್ಷಿಸಿದ್ದಾರೆ. ನೀರುಪಾಲಾಗಿರುವ ಅಭಿಲಾಷ್ ಪತ್ತೆಯಾಗಿಲ್ಲ.
ಕೊಳಚಿಕಂಬಳ ಬಳಿ ನದಿಯಲ್ಲಿ ನೀರು ಇಳಿತದ ಸಮಯ ಸುಮಾರು 2 ಕಿ.ಮೀ. ನದಿ ಪ್ರದೇಶ ಖಾಲಿಯಾಗಿ ಮೈದಾನದಂತಿರುತ್ತದೆ. ಈ ಸಂದರ್ಭದಲ್ಲಿ ಜನರು ಇಲ್ಲಿ ಇಳಿದು ಅಳಿವೆಯ ತನಕ ನಡೆದುಕೊಂಡು ಹೋಗುತ್ತಾರೆ. ಆದರೆ ಭರತ ಆರಂಭವಾದರೆ ನಾಲ್ಕು ದಿಕ್ಕಿನಿಂದಲೂ ಸುಮಾರು ನಾಲ್ಕೈದಡಿ ನೀರು ತುಂಬಿಕೊಳ್ಳುತ್ತಿದ್ದು, ಈ ಹಿಂದೆಯೂ ಹಲವಾರು ಅವಘಡಗಳು ಇಲ್ಲಿ ನಡೆದ ಉದಾಹರಣೆಗಳು ಇವೆ. ಈ ಬಗ್ಗೆ ಎಚ್ಚರಿಸಿ ನೀರಿಗೆ ಇಳಿಯದಂತೆ ಸೂಚಿಸಿದರೆ ಯಾರೂ ಕೇಳುವುದಿಲ್ಲ ಸ್ಥಳೀಯರು ಹೇಳುತ್ತಾರೆ.