LATEST NEWS
ಕಿನ್ನಿಗೋಳಿ – ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ – ಸಿಸಿಟಿವಿ ವಿಡಿಯೋ

ಮೂಲ್ಕಿ ಅಗಸ್ಟ್ 1: ಎರಡು ಕಾರುಗಳ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಮಗು ಸಹಿತ ಮೂವರಿಗೆ ಗಂಭೀರವಾಗಿ ಗಾಯಗೊಂಡ ಘಟನೆ ಕಿನ್ನಿಗೋಳಿ–ಮೂಲ್ಕಿ ರಾಜ್ಯ ಹೆದ್ದಾರಿ ಕೆರೆಕಾಡು ಜಂಕ್ಷನ್ ಬಳಿ ನಿನ್ನೆ ನಡೆದಿದೆ.
ಗಾಯಗೊಂಡವರನ್ನು ಕುಂದಾಪುರ ತೆಕ್ಕಟ್ಟೆ ನಿವಾಸಿಗಳಾದ ನಿತಿಲ್(25), ಅವಿನಾಶ್(23), ಮಗು ಮೃತ್ವಿನ್(2) ಗಾಯಾಳುಗಳು. ಇನ್ನೊಂದು ಕಾರಿನಲ್ಲಿದ್ದ ಮೂಲ್ಕಿ ಮೂಲದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಕಟೀಲು ಕಡೆಯಿಂದ ದೇವರ ದರ್ಶನ ಮುಗಿಸಿಕೊಂಡು ಕುಂದಾಪುರದ ಕಡೆಗೆ ಹೊರಟಿದ್ದ ಕಾರು ಕಿನ್ನಿಗೋಳಿ ರಾಜ್ಯ ಹೆದ್ದಾರಿ ಕೆರೆಕಾಡು ತಲುಪುತ್ತಿದ್ದಂತೆ ಮೂಲ್ಕಿ ಕಡೆಯಿಂದ ಅತಿ ವೇಗವಾಗಿ ಬಂದ ಕಾರು ಹೆದ್ದಾರಿ ಹೊಂಡ ತಪ್ಪಿಸುವ ಬರದಲ್ಲಿ ಎದುರಿನಿಂದ ಬಂದ ಕಾರಿಗೆ ಡಿಕ್ಕಿ ಹೊಡೆದಿದೆ.

ಅಪಘಾತದ ರಭಸಕ್ಕೆ ಎರಡೂ ಕಾರುಗಳು ಪಲ್ಟಿಯಾಗಿದ್ದು, ಕಾರಿನಲ್ಲಿ ಸಿಲುಕಿದವರನ್ನು ಸ್ಥಳೀಯರು ಕಿನ್ನಿಗೋಳಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದಿಂದ ಕಾರುಗಳು ಜಖಂಗೊಂಡಿದ್ದು, ಕೆಲಹೊತ್ತು ಹೆದ್ದಾರಿ ಸಂಚಾರ ವ್ಯತ್ಯಯ ಉಂಟಾಗಿತ್ತು. ಸ್ಥಳಕ್ಕೆ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸ್ ಭೇಟಿ ನೀಡಿ ಪರಿಶೀಲಿಸಿ ಎರಡು ವಾಹನಗಳನ್ನು ಸ್ಥಳದಿಂದ ಕ್ರೇನ್ ಮೂಲಕ ತೆರವುಗೊಳಿಸಿದರು.